ನೇಹಾ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಕಲಬುರಗಿ:ಏ.22: ಹುಬ್ಬಳ್ಳಿಯ ನೇಹಾ ನಿರಂಜನ್ ಹಿರೇಮಠ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಇಡೀ ಭಾರತ ಸುರಕ್ಷಿತವಾಗಿದೆ. ಆದಾಗ್ಯೂ, ಒಂದು ವೇಳೆ ರಾಹುಲ್‍ಗಾಂಧಿ ಅವರು ಏನಾದರೂ ಪ್ರಧಾನಿಯಾಗಿದ್ದರೆ ಭಾರತವು ಐದೇ ವರ್ಷಗಳಲ್ಲಿ ಪಾಕಿಸ್ತಾನ್ ಆಗುತ್ತಿತ್ತು. ರಾಹುಲ್‍ಗಾಂಧಿಯನ್ನು ನೋಡಿದರೆ ಪಾಕಿಸ್ತಾನ್‍ದವರಂತೆ ಕಾಣುತ್ತಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿನ 28 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬೇಕು. ಅಂದಾಗ ಮಾತ್ರ ಕರ್ನಾಟಕದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗುತ್ತದೆ ಎಂದರು.
ಇಂದು ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾಗಿದೆ. ಈ ಕುರಿತು ಹಿಂದೂಗಳು ವಿಚಾರ ಮಾಡದೇ ಇದ್ದರೆ ಅಂತಹ ಘಟನೆಗಳು ಸ್ವಾಮೀಜಿ ಹೇಳಿದಂತೆ ಕಲಬುರ್ಗಿಗೂ ಸಹ ಹರಡದಲಿದೆ. ಹಾಗಾಗಿ ಉತ್ತರ ಪ್ರದೇಶದಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಕರ್ನಾಟಕದಲ್ಲಿ ಬರಬೇಕು. ಅಂದಾಗ ಲವ್ ಜಿಹಾದ್ ಘಟನೆಗಳು ಸಂಭವಿಸಲಾರವು ಎಂದು ಅವರು ಹೇಳಿದರು.
ಹಿಂದುಗಳ ರಕ್ಷಣೆ ಆಗಬೇಕಾಗಿದೆ. ಲವ್ ಜಿಹಾದ್ ಮೂಲಕ ನೇಹಾ ಹಿರೆಮಠ್ ಕೊಲೆ ಆಗಿದೆ. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಆ ಹೆಣ್ಣು ಮಗಳದ್ದೆ ತಪ್ಪು ಅನ್ನುವ ಹಾಗೆ ಕಾಂಗ್ರೆಸ್ ಬಿಂಬಿಸ್ತಿದೆ. ಅವರು ಕೊಲೆ ಮಾಡುವ ಹಂತಕ್ಕೆ ಹೋಗ್ತಾರೆ ಅಂದ್ರೆ ರಾಜ್ಯದಲ್ಲಿ ಏನಾಗ್ತಿದೆ. ಮುಸ್ಲಿಂ ಶಾಸಕ ಗೆದ್ದರೆ ಪಾಕಿಸ್ತಾನ್ ಧ್ವಜ ಹಾರಿಸ್ತಾರೆ. ಜೈ ಶ್ರೀರಾಮ್ ಅಂತಾ ಘೋಷಣೆ ಕೂಗಿದ್ರೆ ತಡೆದು ಗಲಾಟೆ ಮಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ಹತ್ಯೆಯಾದರೆ ಅವರ ಸಂತ್ರಸ್ತ ಕುಟುಂಬಕ್ಕೆ ಭದ್ರತೆ ಒದಗಿಸುವ ಬದಲು ರಾಜ್ಯ ಸರ್ಕಾರವು ಆರೋಪಿ ಫಯಾಜ್ ಮನೆಗೆ ಭದ್ರತೆಯನ್ನು ಒದಗಿಸಿತು ಎಂದು ಕಿಡಿಕಾರಿದ ಅವರು, ನೇಹಾ ಅವರ ಮನೆಗೆ ಯಾರು ಬೇಕಾದರೂ ಹೋಗಿ ಬರಬಹುದು. ಯಾವುದೇ ಭದ್ರತೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸರ್ಕಾರ ಮುಸ್ಲಿಂರ ರಕ್ಷಣೆಗೆ ಮುಂದಾಗಿದೆ ಹೊರತು ಹಿಂದುಗಳಿಗೆ ರಕ್ಷಣೆ ಇಲ್ಲ. ರಾಜ್ಯದ ಗೃಹ ಸಚಿವರು ಉಡಾಫೆಯ ಉತ್ತರ ಕೊಡ್ತಾರೆ ಅಂದ್ರೆ ಏನು ಹೇಳಬೇಕು. ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟಿರುವ ಬಗ್ಗೆ ಲಘುವಾಗಿ ಮಾತಾಡಿದರು ಎಂದು ಟೀಕಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ನಿಸ್ಸಿಮರು ಮಾಧ್ಯಮದ ಮುಂದೆ ಹೇಳೊದಕ್ಕೆ ತಾಕತ್ ಇದ್ರೆ ಸಿಬಿಐ ಕೊಟ್ಟು ತನಿಖೆ ಮಾಡಿಸಿ ನಿಮ್ಮ ಸರ್ಕಾರ ಇದೆಯಲ್ಲ ಎಂದು ಸವಾಲು ಹಾಕಿದರು.
ದೇಶದ ಭಯೋತ್ಪಾದಕರ ವಿರುದ್ದ ಬಿಜೆಪಿ ಇದೆ. ಭಯೋತ್ಪಾದನೆಗೆ ನಾವು ಬೆಂಬಲ ಕೊಡುವುದಿಲ್ಲ ಎಂದು ಅವರು ಹೇಳಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ತನ್ನ ಕಾರ್ಯಕರ್ತರ ಮನೆಯಲ್ಲಿ ಹತ್ಯೆಯಾದರೂ ಸಹ ಅದಕ್ಕೆ ನ್ಯಾಯ ಕೊಡಿಸುತ್ತಿಲ್ಲ. ಈ ಸಂಬಂಧ ಪಕ್ಷಾತೀತ ಬಿಜೆಪಿ ಹೋರಾಟ ಮಾಡಿದರೂ ಸಹ ಅದನ್ನು ಪೋಲಿಸರ ಮೂಲಕ ತಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತೆತ್ತಿದ್ದರೆ ತಾಕತ್ತು, ಧಮ್ಮು ಎಂದು ಮಾತನಾಡುತ್ತಾರೆ. ತಾಕತ್ತು ಧಮ್ಮು ಇದ್ದರೆ ನಿಮ್ಮ ಕಾಂಗ್ರೆಸ್ ಮಹಾನಗರ ಪಾಲಿಕೆಯ ಸದಸ್ಯರ ಪುತ್ರಿಗೆ ಹತ್ಯೆ ಮಾಡಿದ ಆರೋಪಿಗೆ ಕೂಡಲೇ ಕಾನೂನಿನ ಅಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ಸಿಗರೇ ಕಾಂಗ್ರೆಸ್ ಸರ್ಕಾರದಲ್ಲಿ ಅಸುರಕ್ಷತೆಗೆ ಒಳಗಾಗಿದ್ದಾರೆ ಎಂಬುದಕ್ಕೆ ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ಹತ್ಯೆಯೇ ಕಾರಣವಾಗಿದೆ. ಆದ್ದರಿಂದ ಕಾಂಗ್ರೆಸ್ಸಿಗರು ಸಹ ಸಂತ್ರಸ್ತ ನೇಹಾ ಹಿರೇಮಠ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಲು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ ಅವರು, ಆರೋಪಿಗೆ ತ್ವರಿತಗತಿಯಲ್ಲಿ ಕಠಿಣ ಕಾನೂನಿನ ಶಿಕ್ಷೆಗೆ ಒಳಪಡಿಸದೇ ಹೋದಲ್ಲಿ ಕಲಬುರ್ಗಿ ಬಂದ್ ಕರೆ ಕೊಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸಿದ್ದಲಿಂಗ್ ಸ್ವಾಮೀಜಿ, ರೇವಣಸಿದ್ದ ಸ್ವಾಮೀಜಿ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಹಾಗೂ ಸಂಸದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಆರೋಪಿಗೆ ತ್ವರಿತಗತಿಯಲ್ಲಿ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಕಾರರು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಘೋಷಣೆಗಳನ್ನು ಹಾಕಿದರು. ಬಿಜೆಪಿ ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ಬರುವುದನ್ನು ಪೋಲಿಸರು ಎಷ್ಟೇ ತಡೆಯಲು ಯತ್ನಿಸಿದರೂ ಸಹ ಅವರನ್ನು ಪಕ್ಕಕ್ಕಿ ಸರಿಸಿ ನಾಯಕರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದವರೆಗೆ ನುಗ್ಗಿದರು. ಮುಖ್ಯ ದ್ವಾರ ಬಂದ್ ಮಾಡಿದ್ದರಿಂದ ಪ್ರತಿಭಟನೆಕಾರರು ಅಲ್ಲಿಯೇ ನಿಂತು ತಮ್ಮ ಹೋರಾಟದಲ್ಲಿ ತೊಡಗಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಬಸವರಾಜ್ ಮತ್ತಿಮೂಡ್, ಶಶೀಲ್ ಜಿ. ನಮೋಶಿ, ಡಾ. ಉಮೇಶ್ ಜಾಧವ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಡಾ. ಇಂದಿರಾ ಶಕ್ತಿ, ಶ್ರೀಮತಿ ಭಾರತಿ ಗುನ್ನಾಪುರ, ಶ್ರೀಮತಿ ಚಂದಮ್ಮ ಪಾಟೀಲ್, ಶಶಿಕಲಾ ಟೆಂಗಳಿ, ಆಂದೋಲಾದ ಸಿದ್ದಲಿಂಗ ಮಹಾಸ್ವಾಮೀಜಿ, ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಮಾಜಿ ಶಾಸಕರಾದ ದತ್ತಾತ್ರೇಯ್ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ತೆಲ್ಕೂರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.