ಸ್ವೀಪ್ ಫುಟಬಾಲ್ ಲೀಗ್‍ಗೆ ಚಾಲನೆ:ಕಡ್ಡಾಯ ಮತದಾನ ಮಾಡಿ,ನೆರೆ ಹೊರೆಯವರನ್ನು ಮತದಾನ ಮಾಡುವಂತೆ ಪ್ರೇರೇಪಿಸಿ
ಕಲಬುರಗಿ:ಏ.22: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಮಿತಿ ವಿವಿಧ ಚಟುವಟಿಕೆಗಳು ಹಮ್ಮಿಕೊಂಡಿದ್ದು, ಸೋಮವಾರ ಕಲಬುರಗಿ ನಗರದ ವೀರೇಂದ್ರ ಪಾಟೀಲ ಬಡಾವಣೆಯ ಫುಟಬಾಲ್ ಅಂಕಣದಲ್ಲಿ “ಸ್ವೀಪ್ ಫುಟಬಾಲ್ ಲೀಗ್” ಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಅವರು ಚೆಂಡಿಗೆ ಕಿಕ್ ಮಾಡುವ ಮೂಲಕ ಲೀಗ್ ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮತದಾರರಿಗೆ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಂವರ್ ಸಿಂಗ್ ಮೀನಾ ಅವರು, ಬರುವ ಮೇ 7 ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನೆರೆ ಹೊರೆಯವರಿಗೂ ಕಡ್ಡಾಯ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪುಟಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಏಪ್ರಿಲ್ 22 ರಿಂದ 25ರ ವರೆಗೆ ಲೀಗ್ ಪಂದ್ಯಾವಳಿ ನಡೆಯಲಿದ್ದು, ಉಚಿತ ಪ್ರವೇಶ ಕಾರಣ ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಏ.25 ರಂದು ಮಧ್ಯಾಹ್ನ ಪೈನಲ್ ಪಂದ್ಯ ಇದ್ದು, ಗೆದ್ದ ತಂಡಕ್ಕೆ ಟ್ರೋಫಿ ನೀಡಲಾಗುತ್ತದೆ.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ್ ಎನ್. ಅಷ್ಟಗಿ, ಪುಟ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷರು-ಪದಾಧಿಕಾರಿಗಳು ಭಾಗವಹಿಸಿದ್ದರು.