ಬಸ್ ಹತ್ತುವಾಗ 2.77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ,ಏ.22-ಕೆಎಸ್‍ಆರ್‍ಟಿಸಿಯ ವಿಭಾಗ-2ರಲ್ಲಿ ಅಸಿಸ್ಟೆಂಟ್ ಸೆಕ್ಯೂರಿಟಿ ಇನ್ಸಪೆಕ್ಟರ್ ಆಗಿರುವ ರಂಗಮ್ಮ ನಾಯಕ್ ಅವರು ತಮ್ಮ ತಾಯಿ ಬಸಮ್ಮ ನಾಯಕ್ ಅವರೊಂದಿಗೆ ಕಲಬುರಗಿ-ಬೆಂಗಳೂರು ಬಸ್ ಹತ್ತಿ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಅವರ ಬ್ಯಾಗ್‍ನಲ್ಲಿದ್ದ 2.77 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ಬಳ್ಳಾರಿ ಸಮೀಪದ ಮಲ್ಲಾಪೂರಕ್ಕೆ ಮದುವೆ ಸಮಾರಂಭಕ್ಕೆಂದು ಹೋಗಲು ರಂಗಮ್ಮ ನಾಯಕ್ ಅವರು ತಮ್ಮ ತಾಯಿ ಬಸಮ್ಮ ನಾಯಕ್ ಅವರೊಂದಿಗೆ ಕಲಬುರಗಿ-ಬೆಂಗಳೂರು ಬಸ್ ಹತ್ತುತ್ತಿದ್ದ ವೇಳೆ ಕಳ್ಳರು ಅವರ ಬ್ಯಾಗ್‍ನಲ್ಲಿದ್ದ 1.40 ಲಕ್ಷ ರೂ.ಮೌಲ್ಯದ 28 ಗ್ರಾಂ.ಬಂಗಾರದ ಲಾಂಗ್ ಚೈನ್, 1.10 ಲಕ್ಷ ರೂ.ಮೌಲ್ಯದ 22 ಗ್ರಾಂ. ಬಂಗಾರದ ಬಳೆಗಳು, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಜುಮಕಿ, 2 ಸಾವಿರ ರೂ.ನಗದು ಮತ್ತು ಪ್ಯಾನ್‍ಕಾರ್ಡ್ ಕಳವು ಮಾಡಿದ್ದಾರೆ.
ಈ ಸಂಬಂಧ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.