ದೃಶ್ಯರೂಪದಲ್ಲಿ ದಾಸವರೇಣ್ಯ ಶ್ರೀವಿಜಯದಾಸರು
ಕಲಬುರಗಿ,ಏ.22: ವಿಜಯದಾಸರ ಸಂಪೂರ್ಣ ಚರಿತ್ರೆ 2.15 ಗಂಟೆಯಲ್ಲಿ ತೆರೆಗೆ ಅಳವಡಿಸುವುದು ಅಸಾಧ್ಯ. ಆದರೂ ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ಕಥೆ ಬೆಳ್ಳಿ ಪರದೆಯ ಮೇಲೆ ಚಿತ್ರಿಸಿದ್ದಾರೆ.ವ್ಯಾಸಕಾಶಿಯಲ್ಲಿ ಪುರಂದರದಾಸರು ವೇದವ್ಯಾಸರಿಂದ ಅಂಕಿತ ಕೊಡಿಸಿದ ಘಟನೆ,ಕಾಶಿ ರಾಜನಿಂದ ವಿಜಯರಾಯರಿಗೆ ಗೌರವ.ಆಗ ಅವರ ನೆನಪಿನ ಅಂಗಳದಲ್ಲಿ ಬಡತನದ ಬೇಗೆಯಲ್ಲಿ ಬಳಲಿದ ದಿನಗಳು,ಸೋದರ ಮಾವನಿಂದಾದ ಅವಮಾನ ಎಲ್ಲವನ್ನೂ ಬಹಳ ಸುಂದರವಾಗಿ ತೋರಿಸಿದ್ದಾರೆ.ವೇದವ್ಯಾಸರಿಂದ ಅಂಕಿತ ಪಡೆದು ಚೀಕಲಪರವಿಗೆ ಬಂದಾಗ ಪತ್ನಿ ಅರಳಮ್ಮನ ಭೇಟಿ ಅತ್ಯಂತ ಹೃದಯಸ್ಪರ್ಶಿಯಾಗಿದೆ.ಚೀಕಲಪರವಿಯಲ್ಲಿ ಕೊಡದಲ್ಲಿಯೇ ಗಂಗೆಯನ್ನು ಆಹ್ವಾನಿಸಿ ವೃದ್ಧ ಬ್ರಾಹ್ಮಣನನ್ನು ಅನುಗ್ರಹಿಸಿದ ರೀತಿ.ತಾವು ಮಧ್ವಪತಿಯಾಗಿದ್ದಾಗ ಯಂತ್ರೋದ್ಧಾರಕನಿಗೆ ನೈವೇದ್ಯ ಮಾಡಿದ ಘಟನೆ.ಪ್ರಸನ್ನ ವೇಂಕಟದಾಸರ ಭೇಟಿ ಅವರಿಬ್ಬರಿಂದ ಕನ್ನಡ ಮತ್ತು ಸಂಸ್ಕøತ ಗೋಪಿಗೀತೆಯ ಹಾಡುಗಾರಿಕೆ ಅದ್ಭುತವಾಗಿ ಮೂಡಿ ಬಂದಿದೆ.ಬಾಲಕ ಮೋಹನದಾಸನ ಮತ್ತು ಆತನ ತಾಯಿಯ ರಕ್ಷಣೆ,ಶಿವನ ಮೇಲಿನ ಹಾಡು,ಯಂತ್ರೋದ್ಧಾರಕನ ಕುರಿತಾದ ಹಾಡು ತುಂಗೆ ಭಾಗೀರಥಿ ಹಾಡು ಹೀಗೆ ಹಲವು ಹಾಡುಗಳು ಕೇಳುಗರ ಮನ ಸೆಳೆಯುತ್ತವೆ. ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸಗೊಂಬ ಕಳ್ಳ ದೊರೆಗೆಎಂಬ ಭಗವಂತನ ನಿಂದಾಸ್ತುತಿ ಚೆಂದವಾಗಿ ಮೂಡಿಬಂದಿವೆ.ನದಿಯ ಪರಿಸರ ಹಳೆಯ ಶಿಲಾಮಂಟಪಗಳು, ಸಿನಿಮಾದ ಮೆರುಗನ್ನು ಹೆಚ್ಚಿಸಿವೆ.ಹಿನ್ನೆಲೆ ಸಂಗೀತ ,ಗಾಯನ ಸುಮಧುರವಾಗಿದೆ.ದಾಸರ ಚರಿತ್ರೆಯನ್ನು ಪೂರ್ಣವಾಗಿ ಬಲ್ಲವರಿಗೆ ಇದು ಅಪೂರ್ಣ ಎನಿಸಿದರೂ ಈ ಚಿತ್ರವನ್ನು ವೀಕ್ಷಿಸುವ ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ದಾಸ ಸಾಹಿತ್ಯದಲ್ಲಿ ಆಸಕ್ತಿ ಮೂಡುವಂತೆ ಮಾಡಲು ಚಿತ್ರ ಸಹಕಾರಿಯಾಗಿದೆ.ಮಧುಸೂದನ ಹವಾಲ್ದಾರ್ ಮತ್ತು ತ್ರಿವಿಕ್ರಮ ಜೋಶಿ ರಾಯಚೂರು ಅವರ ಶ್ರಮಕ್ಕೆ ಅಭಿನಂದನಾರ್ಹ.
ಕಲಬುರಗಿಯವರೇ ಆದ ರವಿ ಲಾತೂರಕರ ಅವರು ಮೊದಲು ಬಾರಿಗೆ ಕಾಶಿರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕಲಬುರಗಿ ಜನರಿಗೆ ಹೆಮ್ಮೆಯ ವಿಷಯ. ಇಂದಿನ ದಿನಗಳಲ್ಲಿ ಕುಟುಂಬ ಸಮೆತ ಕುಳಿತು ಚಲನಚಿತ್ರ ನೋಡುವುದು ಕಡಿಮೆಯಾಗಿದೆ ಈ ಚಿತ್ರ ಕುಟುಂಬ ಸಮೇತ ನೋಡಬಹುದು. ಹಾಡುಗಳು ಬಹಳ ಇಂಪಾಗಿ ಬಂದಿವೆ. ಸಂಗೀತದ ನಿರ್ದೇಶನ ವಿಜಯಕೃಷ್ಣ ಮಾಡಿದ್ದಾರೆ.