ಇರುವುದೊಂದೇ ಭೂಮಿ, ಸಂರಕ್ಷಿಸೋಣ
ಕಲಬುರಗಿ:ಏ.22: ಜಗತ್ತಿನ ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಕತೃವಾದ ಭೂಮಿಯು ಅನೇಕ ಕಾರಣಗಳಿಂದ ಗಂಡಾಂತರಕ್ಕೆ ಸಿಲುಕುವ ಮೂಲಕ ಜೀವರಾಶಿಗಳ ಬದುಕಿಗೆ ಅಪಾಯ ಉಂಟಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಜೀವಿಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ಇರುವ ಒಂದೇ ಭೂಮಿಯ ಸಂರಕ್ಷಣೆ ಮಾಡುವದು ಎಲ್ಲರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಭೂಮಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳಲ್ಲಿ ಭೂಮಿಯು ಮೂರನೇಯದಾಗಿದೆ. ವಾಯು, ನೀರು, ನೆಲ ಹೊಂದಿರುವ, ಜೀವಿಗಳು ವಾಸಿಸಲು ಯೋಗ್ಯವಾಗಿರುವ ಏಕೈಕ ಗ್ರಹ ನಮ್ಮದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಮಾನವನ ದುರಾಸೆಯಂತಹ ಕಾರಣಗಳಿಂದ ಭೂಮಿಯು ಮಲಿನವಾಗಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಹಸಿರು ಮನೆ ಪರಿಣಾಮ, ಓಝೋನ ಪದರಿನ ನಾಶ, ಕುಡಿಯುವ ನೀರಿನ ಅಭಾವ, ಜೀವ ಸಂಕುಲದ ಮೇಲೆ ದುಷ್ಪರಿಣಾಮ, ಅರಣ್ಯಗಳ ಕ್ಷೀಣತೆ, ಭೂಮಿಯ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತಿರುವುದು, ಮಳೆಯ ಪ್ರಮಾಣ ಕುಸಿತವಾಗಿರುವದು ಸೇರಿದಂತೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಪ್ಲಾಸ್ಟಿಕ್, ರಾಸಾಯನಿಕಗಳ ಬಳಕೆ ನಿಷೇದ ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಂಡು ಭೂಮಿಯ ಸಂರಕ್ಷಣೆ ಮಾಡಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಸಿಬ್ಬಂದಿಗಳಾದ ಪ್ರಿಯಾಂಕಾ, ನಿಲೋಫರ್ ಶೇಖ್, ಪ್ರಮುಖರಾದ ರಾಕೇಶ ಚವ್ಹಾಣ, ಪುನಿತ ಢಗೆ, ಪರಶುರಾಮ ನಾಟಿಕಾರ, ಬೀರಪ್ಪ ಜಿ. ಸೇರಿದಂತೆ ಇನ್ನಿತರರಿದ್ದರು.