ಗುರಿಯ ಬೆನ್ಹತ್ತಿ ಶ್ರಮಪಟ್ಟಾಗ ಮಾತ್ರ ಫಲ ಸಿಗುತ್ತದೆ : ಎಂ.ಡಿ.ಆಸಿಮ್
ಬೀದರ:ಏ.22: ವ್ಯಕ್ತಿ ಕನಸುಗಳನ್ನು ಕಾಣಬೇಕು. ಅದರಂತೆ ಪ್ರಯತ್ನ ಮಾಡಿದಾಗ ಸಾಧನೆಯ ಉತ್ತುಂಗ ಶಿಖರಕ್ಕೇರಲು ಸಾಧ್ಯವಾಗುತ್ತದೆ. ಬೀದರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ದೂರವಾಗುತ್ತಿದೆ. ಐಪಿಎಸ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 481 ನೇ ರ್ಯಾಂಕ ಪಡೆದ ಎಂ.ಡಿ.ಆಸೀಮ್ ಬೀದರ ಜಿಲ್ಲೆಯ ಆಸ್ತಿಯಾಗಿದ್ದಾರೆ. ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ತಿಳಿಸಿದರು.
ಬ್ರಿಮ್ಸ್ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘ ಮತ್ತು ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಐಪಿಎಸ್ ಪರೀಕ್ಷೆಯಲ್ಲಿ 481 ರ್ಯಾಂಕ್ ಪಡೆದ ಎಂ.ಡಿ.ಆಸೀಮ್‍ಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರಿಗೆ ಅವರ ಮಾರ್ಗದರ್ಶನ ಅಗತ್ಯ. ಆಸಿಮ್ ಅವರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಹುದ್ದೆಗೆ ಗೌರವ ಕೊಟ್ಟು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಾಗಿ ಹೊರಹೊಮ್ಮಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಐಪಿಎಸ್ ಪರೀಕ್ಷೆಯಲ್ಲಿ 481 ರ್ಯಾಂಕ್ ಪಡೆದ ಎಂ.ಡಿ.ಆಸೀಮ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು. ಗುರಿಯ ಬೆನ್ಹತ್ತಿ ಸತತ ಪ್ರಯತ್ನ ಮಾಡಬೇಕು. ಹೀಗಾದಾಗ ಮಾತ್ರ ಫಲ ಸಿಗುತ್ತದೆ. ಬಹುತೇಕ ಯುವಕರು ಇಂಜಿನಿಯರ್ ಮತ್ತು ವೈದ್ಯ ವೃತ್ತಿ ಕಡೆಗೆ ಸಾಗುತಿದ್ದಾರೆ. ಹೋಗಲಿ ಆದರೆ ಅದಕ್ಕೆ ಹೊರತಾಗಿಯೂ ಐಎಎಸ್ ಐಪಿಎಸ್ ಮತ್ತು ಐಆರ್‍ಎಸ್ ನಂತಹ ಹಲವು ಸಾಧನೆಗಳನ್ನು ಮಾಡಲು ನಮ್ಮಲ್ಲಿ ಅವಕಾಶವಿದೆ. ನನ್ನ ಈ ಸಾಧನೆಗೆ ಪಾಲಕರು ಸಾಕಷ್ಟು ಸಹಕಾರ ನೀಡಿದ್ದಾರೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಕೊನೆಯಲ್ಲಿ ಐಪಿಎಸ್ ಸಾಧಕರಾದ ಎಂ.ಡಿ. ಆಸೀಮ್ ಅವರಿಗೆ ಶಾಲು ಹೊದಿಸಿ, ಮೈಸೂರ ಪೇಟಾ ತೊಡಿಸಿ, ವಿಶ್ವಗುರು ಬಸವೇಶ್ವರರ ಪುತ್ಥಳಿಯನ್ನು ನೆನಪಿನ ಕಾಣಿಕೆಯಾಗಿ ನೀಡಿ ಸತ್ಕರಿಸಲಾಯಿತು.
ಇದೇ ವೇಳೆ ಡಾ. ಯಶಪಾಲ್ ಮಹಿಂದ್ರಕರ್, ಡಾ.ಸುನೀತ ಕೂಡ್ಲಿಕರ್, ಎಸ್.ಬಿ.ಕುಚಬಾಳ ಹಾಗೂ ಆಸಿಮ್ ಅವರ ತಂದೆ ಎಂ.ಡಿ.ಏಜಾಜ್ ಮಾತನಾಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಗುರುನಾಥ ಉದಗಿರೆ, ವಿಜಯಕುಮಾರ ಚಾಮಾ, ಸಂಜೀವಕುಮಾರ ಮೊಸಳೆ, ಸಂತೋಷರೆಡ್ಡಿ, ಸಂಗೀತಾ, ಮಹಾನಂದ, ಸತ್ಯಶೀಲಾ, ಭಾರತಿ, ಗೋದಾವರಿ, ರೇಣುಕಾ, ಶಿವಲೀಲಾ ಅಕ್ಕಿ, ಎಂ.ಡಿ.ಅಜೀಮ್ ಸೇರಿದಂತೆ ಹಲವರಿದ್ದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಮಹಾರುದ್ರ ಡಾಕುಳಗೆ ವಂದಿಸಿದರು.