ಅಹಿಂಸೆಯಿಂದ ಜಗತ್ತಿನ ಅನೇಕ ಸಮಸ್ಯೆಗಳಿಗೆ ಮುಕ್ತಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಏ22: ಅಹಿಂಸೆಯ ಸಂದೇಶ ಸಾರಿದ ಮಹಾವೀರರು ಸರ್ವಕಾಲಿಕ ಪ್ರಸ್ತುತರಾಗುತ್ತಾರೆ. ಜಗತ್ತಿನೆಲ್ಲೆಡೆ ಯುದ್ಧದ ಕಾರ್ಮೋಡ ಕವಿಯುತ್ತಿರುವ ಇವತ್ತಿನ ವಾತಾವರಣದಲ್ಲಿ ಮನುಕುಲದ ಏಳಿಗೆಗಾಗಿ ಅಹಿಂಸಾ ಮನೋಭಾವ ಎಷ್ಟು ಮಹತ್ವವಾದುದೆಂದು ಮಹಾವೀರರ ಸಂದೇಶದಿಂದ ತಿಳಿಯಬಹುದಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಎ. ಮುರಿಗೆಪ್ಪ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕದ ಸಾಹಿತ್ಯ-ಸಂಸ್ಕøತಿ-ಕಲೆಯ ಕ್ಷೇತ್ರಕ್ಕೆ ಜೈನಧರ್ಮದ ಕೊಡುಗೆ ಅಪಾರವಾದುದೆಂದು ತಿಳಿಸಿದರು. ಅಹಿಂಸೆಯ ಪ್ರತಿಪಾದನೆ ಮಾಡಿದ ಮಹಾವೀರ ಇವತ್ತಿಗೂ ನಮಗೆ ಮಾದರಿಯಾಗಿದ್ದಾನೆ. ಸಮಾಜವು ಅಹಿಂಸಾ ಪರಿಕಲ್ಪನೆಯ ಮೂಲಕ ಶಾಂತಿಯಿಂದ ವರ್ತಿಸಬೇಕಿದೆ. ಈ ಜಗತ್ತಿನಲ್ಲಿ ಸಣ್ಣ ಇರುವೆಗೂ ಕೂಡ ಬದುಕುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಮಾತನಾಡಿ ಮಹಾವೀರರ ಸಂದೇಶ ನಮಗೆ ಶಾಂತಿಯಿಂದ ಬದುಕುವುದನ್ನು ಕಲಿಸುತ್ತದೆ ಎಂದು ಮಹಾವೀರರ ಸಂದೇಶಗಳನ್ನು ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಹಿಂಸೆ ನಮ್ಮ ಬದುಕಿನ ಮಂತ್ರವಾಗಬೇಕು. ಅಹಿಂಸೆಯ ತತ್ತ್ವವನ್ನು ಜಗತ್ತಿಗೆ ನೀಡಿದ ಮೊದಲ ದೇಶ ನಮ್ಮ ಭಾರತ, ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಇದು ಮಾನ್ಯವಾಗಬೇಕೆಂದರೆ ಅಹಿಂಸೆಯ ಆಚರಣೆಯಿಂದ ಮಾತ್ರ ಸಾಧ್ಯ. ಅಹಿಂಸೆಯ ಪಾಲನೆ ಜಗತ್ತಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಜಗತ್ತಿನಲ್ಲಿ ಶಾಂತಿ, ಸಾಮರಸ್ಯ ಉಂಟಾಗಲು ಅಹಿಂಸೆಯ ಪರಿಪಾಲನೆ ಅತ್ಯಾವಶ್ಯಕ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಲೀಲಾ ಮುರಿಗೆಪ್ಪ, ಕೃಪಾಶಂಕರ್, ಕಲಾವಿದ ಹುಸೇನ್ ಪ್ರಾಧ್ಯಾಪಕರು, ಬೋಕಕೇತರ ಸಿಬ್ಬಂದಿ ಪಾಲ್ಗೊಂಡಿದದರು.