ಹೊಸಪೇಟೆಯಲ್ಲಿ  ದತ್ತ ಮೂರ್ತಿಯ ಪ್ರತಿಷ್ಠಾನೆರಾಮ ಲಲ್ಲಾ ಮೂರ್ತಿಯ ಶಿಲ್ಪಿಯ  ಅಣ್ಣನಿಂದ ಕೆತ್ತನೆ.
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಏ.22:   ಅಯೋಧ್ಯೆ ರಾಮಲಲ್ಲಾನನ್ನು ಕೆತ್ತಿದ ಖ್ಯಾತ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರ ಅಣ್ಣ ಸೂರ್ಯಪ್ರಕಾಶ್ ಶಿಲ್ಪಿ ಕೆತ್ತಿದ ಶ್ರೀ ದತ್ತಾತ್ರೇಯ ‌ಮೂರ್ತಿ ಪ್ರತಿಷ್ಠಾಪನೆ ನಗರದ ಚಿತ್ತವಾಡಗಿಯಲ್ಲಿ ವೈಭವದಿಂದ ಜರುಗಿತು.
ಶನಿವಾರ ಹಾಗೂ ಭಾನುವಾರದಂದು ಶ್ರೀ ಬನಶಂಕರಿ ಗುಡಿ ಸಮೀಪದಲ್ಲಿ ದತ್ತಾತ್ರೇಯ ಮಂದಿರ ನಿರ್ಮಿಸುವ ಕೆಲಸಕ್ಕೆ ಶ್ರೀವಲ್ಲಭರಾವ್ ದೇಸಾಯಿ ಅವರು ಶ್ರೀಕಾರ ಹಾಕಿ ಗರ್ಭಗುಡಿಯನ್ನೂ ನಿರ್ಮಿಸಿದ್ದರು. ಅವರ ಮಕ್ಕಳು ಮತ್ತು ಊರವರ ಸಹಕಾರದಿಂದ ದೇವಸ್ಥಾನ ನಿರ್ಮಾಣಗೊಂಡು, ಏಳೆಂಟು ವರ್ಷಗಳಿಂದ ದತ್ತ ಪಾದುಕೆಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಇದೀಗ ಸುಂದರ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮತ್ತು ನಗರದ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಅಸಂಖ್ಯಾತ ಭಕ್ತರು  ಮೂರ್ತಿ ಪ್ರತಿಷ್ಠಾಪನೆ ಮತ್ತು ಮಹಾಕುಂಭಾಭಿಷೇಕ  ಕಣ್ಣತುಂಬಿಕೊಂಡರು.
ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಕೆತ್ತುವುದಕ್ಕೆ ಮೊದಲಾಗಿಯೇ ಸೂರ್ಯಪ್ರಕಾಶ್ ಶಿಲ್ಪಿ ಅವರಿಗೆ ದತ್ತಾತ್ರೇಯ ಮೂರ್ತಿಯನ್ನು ಕೆತ್ತಲು ಸೂಚಿಸಲಾಗಿತ್ತು. ಆದರೆ ಪ್ರತಿಷ್ಠಾಪನೆ ದಿನಾಂಕ ಮುಂದಕ್ಕೆ ಹೋಗುತ್ತಿದ್ದ ಕಾರಣ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ಈ ಮೂರ್ತಿಯನ್ನು ನಿರ್ಮಿಸಿ ತರಿಸಿದಂತಾಗಿದೆ.
ವಿಗ್ರಹ ಮೂರು ಅಡಿ ಎತ್ತರವಿದ್ದು, ಪೀಠ ಒಂದೂವರೆ ಅಡಿ ಎತ್ತರವಿದೆ. ಪಾದುಕೆಯೂ ಇದೆ. ಒಟ್ಟಾರೆ ಸುಮಾರು ನಾಲ್ಕೂಮುಕ್ಕಾಲು ಅಡಿ ಎತ್ತರದ ವಿಗ್ರಹ ಇದೀಗ ತಲೆ ಎತ್ತಿದ್ದು, ನಗರದಲ್ಲಿ ಭಕ್ತರ ಆಕರ್ಷಣೆಯ ಕೇಂದ್ರವಾಗಿ ಬದಲಾಗುವ ನಿರೀಕ್ಷೆ ಇದೆ.
‘ಶ್ರೀರಾಮಲಲ್ಲಾ ಮೂರ್ತಿಯ ಕಲ್ಲು ದೊರೆತ ಹೆಗ್ಗಡದೇವನಕೋಟೆ ಪ್ರದೇಶದದಿಂದಲೇ ಈ ಕೃಷ್ಣ ಶಿಲೆಯನ್ನು ಆಯ್ಕೆ ಮಾಡಲಾಗಿದ್ದು, ಅದರಿಂದಲೇ  ದತ್ತ  ವಿಗ್ರಹವನ್ನು ಕೆತ್ತಲಾಗಿದೆ. ಅರುಣ್‌ ಯೋಗಿರಾಜ್‌, ಸೂರ್ಯಪ್ರಕಾಶ್ ಶಿಲ್ಪಿ ಅವರು ನಿಜಕ್ಕೂ ಅದ್ಭುತ ಶಿಲ್ಪಕಲಾವಿದರು ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು ದೇವರ ಪ್ರತಿಷ್ಠಾಪನೆಗೆ ಆಗಮಿಸಿದ್ದ ಭಕ್ತರೊಬ್ಬರು ತಮ್ಮ ಸಂತಸ ಹಂಚಿಕೊಂಡರು.