ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶಪ್ರಾಂಶುಪಾಲರ ಸಂಘದಿಂದ ಡಿಡಿಪಿಯುಗೆ ಸತ್ಕಾರ
ಬೀದರ್: ಏ.22:ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆ ಕಲ್ಯಾಣ ಕರ್ನಾಟಕದಲ್ಲೇ ಉತ್ತಮ ಫಲಿತಾಂಶ ಪಡೆದ ಪ್ರಯುಕ್ತ ನಗರದ ಮಾಧವನಗರದ ಆರ್.ಆರ್.ಕೆ. ಸಮಿತಿಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲರ ಸಂಘ, ಜಿಲ್ಲೆಯ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಂದ ಶಾಲು ಹೊದಿಸಿ, ಹೂಮಾಲೆ ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಬಾರಿ ಜಿಲ್ಲೆಗೆ ಶೇ 81.69 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 3.69 ರಷ್ಟು ಅಧಿಕ ಫಲಿತಾಂಶ ಲಭಿಸಿದೆ. ಇದು, ಕಲ್ಯಾಣ ಕರ್ನಾಟಕದಲ್ಲೇ ಅತಿಹೆಚ್ಚು ಫಲಿತಾಂಶವಾಗಿದೆ. ಉಪ ನಿರ್ದೇಶಕರು ಉಪನ್ಯಾಸಕರಿಗೆ ನಡೆಸಿದ ಕಾರ್ಯಾಗಾರ, ಸಂಪನ್ಮೂಲ ವ್ಯಕ್ತಿಗಳ ವಿಶೇಷ ತರಗತಿ ಮೊದಲಾದವು ಫಲಿತಾಂಶ ವೃದ್ಧಿಗೆ ಕಾರಣವಾಗಿವೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯರು ಅಭಿಪ್ರಾಯಪಟ್ಟರು.
ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಜೈನೇಂದ್ರಪ್ರಸಾದ್ ಆರ್, ಬಸವಕಲ್ಯಾಣದ ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸಿದ್ಧಯ್ಯ ಎಸ್. ಬರಸಾನೋರ್ ಹಾಗೂ ಚಿಟಗುಪ್ಪದ ಗೌರಿಬಾಯಿ ಅಗ್ರವಾಲ್ ಕನ್ಯಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ವಿಜಯಕುಮಾರ ಕೆ. ಪಾಟೀಲ ಸನ್ಮಾನಿಸಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ, ಕಾರ್ಯದರ್ಶಿ ಮನ್ಮಥ ಢೋಲೆ,
ಆರ್.ಆರ್.ಕೆ. ಕಾಲೇಜು ಪ್ರಾಚಾರ್ಯ ಶ್ರೀಕಾಂತ ಪಾಟೀಲ, ಸಿದ್ಧಾರ್ಥ ಕಾಲೇಜು ಪ್ರಾಚಾರ್ಯ ಎಸ್. ಪ್ರಭು, ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜು ನಿರ್ದೇಶಕಿ ಕಲ್ಪನಾ, ಪ್ರಾಚಾರ್ಯೆ ಮಂಗಲಾ, ಪ್ರಾಚಾರ್ಯರಾದ ಓಂಪ್ರಕಾಶ ದಡ್ಡೆ, ಡಾ. ಬಸವರಾಜ ಬಲ್ಲೂರ, ಚಂದ್ರಕಾಂತ ಬಿರಾದಾರ, ಶಿವರಾಜ ನಾಯ್ಕ್, ಬಸವರಾಜ ಮಯೂರ್ ಮತ್ತಿತರರು ಇದ್ದರು.