ಪೋಷಕರ ತ್ಯಾಗಕ್ಕೆ ಬೆಲೆ ನೀಡಿದರೆ ನೆಮ್ಮದಿಯ ಬದುಕು ಸಾಧ್ಯ
ತುಮಕೂರು, ಸೆ. ೨೧- ಮಕ್ಕಳು ಪೋಷಕರ ಪ್ರತಿ ತ್ಯಾಗಕ್ಕೆ ಬೆಲೆ ನೀಡಿದಾಗ ಪೋಷಕರು ನೆಮ್ಮದಿಯ ಜೀವನ ಸಾಗಿಸುತ್ತಾರೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೋಹಕ್ಕೆ ಬಿದ್ದರೆ ಜನರ ಬದುಕು ದುಷ್ಟಮಯವಾಗಿ ಅಂತ್ಯಗೊಳ್ಳುತ್ತದೆ ಎಂದು ನ್ಯಾಯಾಧೀಶರಾದ ನೂರ್ ಉನ್ನಿಸ್ಸಾ ಹೇಳಿದರು.
ನಗರದ ಅನನ್ಯ ಇನ್ಸಿಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೆಂಜ್‌ಮೆಂಟ್ ವತಿಯಿಂದ ಪ್ರಥಮ ವರ್ಷದ ಬಿಕಾಂ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆದಷ್ಟು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಓದಿನ ಕಡೆ ಹೆಚ್ಚು ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಭಾರತೀಯ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ಸಾಕ್ಷ್ಯಾ ಅಧಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ, ಪೋಕ್ಸೋ ಕಾಯಿದೆಯ ಕಾನೂನುಗಳ ಬಗ್ಗೆ ಹಲವು ನೈಜ ಘಟನೆಯ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಅನನ್ಯ ಸಂಸ್ಥೆಯ ಕಾರ್ಯದರ್ಶಿ ಟಿ.ಎನ್.ಚೆನ್ನಬಸವಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಸಮಯದಲ್ಲಿ ಬದುಕಿನಲ್ಲಿ ಗುರಿ ಇಟ್ಟುಕೊಂಡು ಪ್ರಯತ್ನ ಮತ್ತು ಪರಿಶ್ರಮದ ಮೂಲಕ ತಮ್ಮ ಗುರಿಗಳನ್ನು ತಲುಪಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಉನ್ನತವಾದ ಬದುಕನ್ನು ಕಟ್ಟಿಕೊಳ್ಳಬೇಕು ಹಾರೈಸಿದರು.
ಕಾರ್ಯಕ್ರಮದಲ್ಲಿ ಅನನ್ಯ ಸಂಸ್ಥೆಯ ಅಧ್ಯಕ್ಷ ಚಾರ್ಟೆಡ್ ಅಕೌಂಟೆಂಟ್ ಎಸ್. ವಿಶ್ವನಾಥ್, ಖ್ಯಾತ ಮನೋವಿಕಾಸ ತಜ್ಞ ಸಿ.ಸಿ. ಪಾವಟೆ, ಅನನ್ಯ ಸಂಸ್ಥೆಯ ಟ್ರಸ್ಟಿ ಡಾ. ಹೆಚ್. ಹರೀಶ್, ಅನನ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.