ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ
ತುಮಕೂರು, ಸೆ. ೨೧- ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಡಿಲು ಸಂಸ್ಥೆ ಮಾಡುತ್ತಿದ್ದು, ಉತ್ತಮ ವಾತಾವರಣ ಮತ್ತು ಉತ್ತಮ ಪರಿಸರ ಹೊಂದಿದ್ದರೆ ಉತ್ತಮ ಗುರಿ ಮುಟ್ಟಲ್ಲೂ ಸಾಧ್ಯವಾಗುತ್ತದೆ. ದೀನ-ದಲಿತ, ದುರ್ಬಲ ಮಕ್ಕಳಿಗೆ, ರೈತ ಮಕ್ಕಳು, ಕಾರ್ಮಿಕ ಮಕ್ಕಳು, ಸಿರಿವರ ಕಾಡಗೊಲ್ಲ ಮಕ್ಕಳ ಜತೆ ಮಡಿಲು ಸಂಸ್ಥೆಯೂ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಎಲ್. ಕಾಡದೇವರಮಠ ಹೇಳಿದರು.
ತಾಲ್ಲೂಕಿನ ಸಿರಿವರ ಗ್ರಾಮದ ಸೇವಾ ಟ್ರಸ್ಟ್, ವಿಪ್ರೋ ಕೇರ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಕ್ಷರ ಮಡಿಲು ಕಾರ್ಯಕ್ರಮದಲ್ಲಿ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ರೀಡ್ ಬುಕ್ ಫೌಂಡೇಷನ್ ವತಿಯಿಂದ ಸುಮಾರು ೧೫ ಲಕ್ಷ ಮಕ್ಕಳಿಗೆ ತರಬೇತಿ ನೀಡುತ್ತಾ ಬಂದಿದ್ದು, ಸುಮಾರು ೪೨ ಲಕ್ಷ ಜನರಿಗೆ ಉಚಿತವಾಗಿ ಕಲಿಕಾ ಸಾಮಾಗ್ರಿಗಳನ್ನು ನೀಡುತ್ತಾ ಬಂದಿವೆ. “ನನ್ನ ಏಳ್ಗೆಗೆ ನಾನೇ ಶಿಲ್ಪಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ೮ನೇ ತರಗತಿಯಿಂದ ಪದವಿಯ ಮಕ್ಕಳವರೆಗೆ ಶಿಕ್ಷಣ ನೀಡುತ್ತಾ ಬಂದಿವೆ. “ಯಶಸ್ಸಿನ ಶಿಲ್ಪಿ’ ಎಂಬ ಪುಸ್ತಕದಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಪರಿಶ್ರಮ ಮತ್ತು ಶಿಲ್ಪಿ ಎರಡು ಅತಿಮುಖ್ಯವಾಗಿದೆ. ಎಲ್ಲರೂ ಕೈ ಜೋಡಿಸಿದರೆ ಮಡಿಲು ಸಂಸ್ಥೆಯೂ ಮತ್ತಷ್ಟು ಯಶಸ್ಸುಗಳಿಸಬಹುದು ಎಂದರು.
ರೋಟರಿ ಸಂಸ್ಥೆ ವತಿಯಿಂದ ಸುಮಾರು ೫೦೦ ಜನರಿಗೆ ಹೃದಯ ಶಸ್ತ್ರಚಿಕಿತ್ಸೆ ಹಾಗೂ ೩೫೦ ಕ್ಕೂ ಹೆಚ್ಚು ಅಂಗವಿಕಲರಿಗೆ ರೋಟರಿ ಸಂಸ್ಥೆ ವತಿಯಿಂದ ಸಲಕರಣೆಗಳನ್ನು ನೀಡಲಾಗಿದೆ ಎಂದರು.
ತುಮಕೂರು ರೋಟರಿ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಗಣ್ಯವ್ಯಕ್ತಿಗಳಾಗಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕು. ಮಡಿಲು ಸಂಸ್ಥೆಯೂ ಇತಂಹ ಗ್ರಾಮೀಣ ಮಕ್ಕಳನ್ನು ಒಟ್ಟುಗೂಡಿಸಿ ಇತಂಹ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಅಲೆಮಾರಿ ಜನಾಂಗದ ಸಾಧಕ ಮಕ್ಕಳನ್ನು ಗುರುತಿಸಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಉತ್ತಮವಾಗಿದೆ. ತುಮಕೂರಿನ ಸುತ್ತಮುತ್ತಲಿನಲ್ಲಿ ಸುಮಾರು ೧೧ ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇನ್ನೂ ಹೆಚ್ಚು ೧೦೧ ಕಲಿಕಾ ಕೇಂದ್ರವಾಗಲಿ. ಕಲಿಕೆಯೂ ಎಲ್ಲಿಯೂ ಇಲ್ಲ, ಕಲಿಯಬೇಕು ಎಂಬ ಉತ್ಸಾಹವಿದ್ದರೆ ಎಲ್ಲಿ ಬೇಕಾದರೂ ಕಲಿಯಬಹುದು ಎಂದರು.
ಸಿರಿವರ ಗ್ರಾಮ ಪಂಚಾಯ್ತಿ ಪಿಡಿಓ ಅಹಮದ್ ಪಾಷ ಮಾತನಾಡಿ, ಬಡ ಹಾಗೂ ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ಎಷ್ಟೋ ಜನಾಂಗದ ಮಕ್ಕಳ ನೆರವಿಗೆ ಮಡಿಲು ಸಂಸ್ಥೆ ಮುಂದಾಗಿದೆ. ಮಡಿಲು ಸಂಸ್ಥೆಯ ಕಾರ್ಯಕ್ರಮಗಳು ಹೀಗೆ ನಿರಂತರವಾಗಿ ಯಶಸ್ವಿಯಾಗಲಿ ಎಂದು ಹರ್ಷವ್ಯಕ್ತಪಡಿಸಿದರು. ಕಲಿಕಾ ಕೇಂದ್ರಗಳ ಸರ್ಕಾರಿ ಶಾಲೆಯ ಮಕ್ಕಳಿರುವ ಜಾಗದಲ್ಲಿಯೇ ನಡೆಸಲಾಗುವುದು. ನಾವು ಕಾರ್ಯಕ್ರಮ ಮಾಡುತ್ತಿರುವುದು ಸರ್ಕಾರಿ ಶಾಲೆಯ ಮಕ್ಕಳಿಗಾಗಿ. ಕಳೆದ ವರ್ಷ ಮಡಿಲು ಸಂಸ್ಥೆಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸರ್ಕಾರವೂ ಇಂತಹ ಮಡಿಲು ಸಂಸ್ಥೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿರಿವರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮೊಹಮ್ಮದ್ ಇಜಾಜ್ ಮಾತನಾಡಿ, ಸುತ್ತಮುತ್ತಲ ಶಾಲೆಗಳನ್ನು ಗುರುತಿಸಿ ಅವರಿಗೆ ಬೇಕಾದ ಶಾಲಾ ಸಾಮಾಗ್ರಿಗಳಾದ ಪುಸ್ತಕ, ಬ್ಯಾಗ್ ಇನ್ನ ಮುಂತಾದ ಕಲಿಕಾ ಸಾಮಗ್ರಿಗಳನ್ನು ನೀಡುತ್ತಾ ಬಂದಿರುವುದು ಇಂತಹ ಮಡಿಲು ಸಂಸ್ಥೆ ಸಂತೋಷದಾಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಲು ಸೇವಾ ಟ್ರಸ್ಟ್‌ನ ಅಬ್ರಹಾಂ ಮಾತನಾಡಿ, ಮಡಿಲು ಸಂಸ್ಥೆಯಿಂದ ಎಲ್ಲ ರೈತ ಬುಡಕಟ್ಟು ಕಾಡಗೊಲ್ಲ ಮಕ್ಕಳಿಗೆ ಇತಂಹ ಕಾರ್ಯಕ್ರಮವನ್ನು ರೂಪಿಸಿರು ವುದು ಅದ್ಭುತವಾಗಿದೆ. ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ರೂಪಿಸುವ ಕೆಲಸ ಮಡಿಲು ಸಂಸ್ಥೆ ಸುಮಾರು ವರ್ಷಗಳಿಂದ ನಡೆಸುವ ಕಾರ್ಯವಾಗಿದೆ ಎಂದು ತಿಳಿಸಿದರು.
ಮಡಿಲು ಸೇವಾ ಟ್ರಸ್ಟ್‌ನ ಮುಖ್ಯಸ್ಥೆ ಲಕ್ಷ್ಮಿ ಅರಸು ಮಾತನಾಡಿ, ತುಮಕೂರಿನ ಸುತ್ತಮುತ್ತ ಇರುವ ಸುಮಾರು ೧೧ ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚು ಹೆಚ್ಚು ಕಲಿಕಾ ಕೇಂದ್ರ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಿರಿವರ ಗ್ರಾಮ ಪಂಚಾಯ್ಯ ಅಧ್ಯಕ್ಷೆ ಜಯಮ್ಮ, ಮಡಿಲು ಸಂಸ್ಥೆಯ ಲಕ್ಷ್ಮಿ ಅರಸು, ಸಿರಿವರ ಗ್ರಾಮ ಪಂಚಾಯ್ಯ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು, ತುಮಕೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಶಿಕ್ಷಣಾರ್ಥಿಗಳು ಹಾಗೂ ಮೈಸೂರು ಜೆ.ಎಸ್.ಎಸ್.ಕಾಲೇಜಿನ ಸಮಾಜ ಕಾರ್ಯ ವಿಭಾಗದ ಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.