ಮಧುಗಿರಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ: ಸಚಿವ ರಾಜಣ್ಣ ಭರವಸೆ
ಮಧುಗಿರಿ, ಸೆ. ೨೧- ಮುಂದಿನ ದಿನಗಳಲ್ಲಿ ಮಧುಗಿರಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಗೆಗೇರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದ ಅಭಿವೃದ್ಧಿ ಗೆ ೨೫ ಕೋಟಿ, ಅಲ್ಪಸಂಖ್ಯಾತ ನಡುವೆ ನಿಗಮದ ವತಿಯಿಂದ ೫ ಕೋಟಿ ರೂ.ಸೇರಿದಂತೆ ೩೦ ಕೋಟಿ ಮಂಜೂರಾಗಿದ್ದು, ಅಮೃತ ಯೋಜನೆಯಡಿ ೩೦ ಕೋಟಿ ಮತ್ತು ಅಲ್ಪಸಂಖ್ಯಾತರ ನಿಗಮದ ವತಿಯಿಂದ ೫ ಕೋಟಿ ಮಂಜೂರಾಗಲಿದ್ದು, ಪಟ್ಟಣದ ಅಭಿವೃದ್ಧಿ ಗೆ ವಿನಿಯೋಗಿಸಿಕೊಂಡು ಪಟ್ಟಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದರ ಜತೆಗೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಏನೆಲ್ಲ ಬೇಕೋ ಅದೆಲ್ಲವನ್ನೂ ಒದಗಿಸಲಾಗುವುದು ಎಂದರು.
ಪಟ್ಟಣದಲ್ಲಿ ಒಳ್ಳೆಯ ಸ್ಥಳ ಹುಡುಕಿ ಅಕ್ಕ ಕ್ಯಾಂಟಿನ್ ಆರಂಭಿಸೋಣ. ಎಲ್ಲರೂ ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಿ. ರಸ್ತೆ, ಚರಂಡಿಗಳ ಸ್ವಚ್ಚತೆಯ ಕಡೆ ಗಮನಹರಿಸುವ ಮೂಲಕ ಪಟ್ಟಣವನ್ನು ಸುಂದರವಾಗಿಟ್ಟುಕೊಳ್ಳಿ. ಏನೇ ಮಾಡಿದರೂ ಜನರಿಗೆ ಅನುಕೂಲವಾಗುವಂತೆ ಮಾಡಿ ಎಂದು ಕಿವಿ ಮಾತು ಹೇಳಿದರು.
ಪಟ್ಟಣದಲ್ಲಿ ವಾರಕ್ಕೆ ೨ ದಿನ ನೀರು ಬಿಡಲಾಗುತ್ತಿದೆ ಎಂಬ ದೂರುಗಳಿದ್ದು, ನೀರಿಲ್ಲ ಎಂದರೆ ನೀರು ಬಿಡುವುದು ಕಷ್ಟ. ಆದರೆ ನೀರಿದ್ದೂ ಬಿಡದಿದ್ದರೆ ಹೇಗೆ, ೨೪ ಗಂಟೆ ವಿದ್ಯುತ್ ಇರುತ್ತದೆ. ಪ್ರತೀ ದಿನ ನೀರು ಬಿಡಲು ಏನು ಸಮಸ್ಯೆ, ವಾಟರ್ ಮನ್‌ಗಳು ಏನು ಮಾಡುತ್ತಿದ್ದಾರೆ. ನಿಮಗೆ ಆಗಲಿಲ್ಲ ಎಂದರೆ ಬಿಟ್ಟು ಹೋಗಿ ಬೇರೆಯವರನ್ನು ನೇಮಿಸಿಕೊಂಡು ನೀರು ಬಿಡಿಸುತ್ತೇನೆ. ಇನ್ನು ಮುಂದೆ ಎಲ್ಲ ವಾರ್ಡುಗಳಲ್ಲೂ ಪ್ರತೀ ದಿನ ನೀರು ಬಿಡಬೇಕು. ಅದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಿ. ಅಕ್ಟೋಬರ್ ೨ ಗಾಂಧೀ ಜಯಂತಿ ದಿನದಿಂದ ಎಲ್ಲ ವಾರ್ಡುಗಳಿಗೂ ಪ್ರತೀ ದಿನ ನೀರು ಬಿಡಬೇಕು ಎಂದು ಇಂಜಿನಿಯರ್ ಸಂಜೀವ ಮೂರ್ತಿ ರವರಿಗೆ ಸೂಚನೆ ನೀಡಿದರು.
ಪುರಸಭೆಯ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಾಗ ಬಾಡಿಗೆದಾರರನ್ನು ಕರೆದು ಅಧ್ಯಕ್ಷರು ಮತ್ತು ಸದಸ್ಯರ ಸಭೆ ಕರೆದು ಚರ್ಚಿಸಿ ಬಾಡಿಗೆ ಹೆಚ್ಚಿಸುವ ಬಗ್ಗೆ ಚರ್ಚಿಸಿ, ಅಥವಾ ಕರಾರು ಅಗ್ರಿಮೆಂಟ್ ಏನಿದೆಯೋ ಅದರ ಪ್ರಕಾರವಾದರೂ ಬಾಡಿಗೆ ವಸೂಲು ಮಾಡಿ ಎಂದು ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೆಳ ಭಾಗದ ಅಂಗಡಿಗಳು ಮತ್ತು ಮೇಲ್ಭಾಗದ ಅಂಗಡಿಗಳಿಗೂ ಒಂದೇ ಬಾಡಿಗೆ ವಿಧಿಸಿದ್ದು, ಇದರಿಂದ ಮೇಲಿನ ಅಂಗಡಿ ಬಾಡಿಗೆದಾರರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಇದರ ಬಗ್ಗೆ ಗಮನಹರಿಸಿ ಎಂದು ಸಚಿವರಿಗೆ ಪುರಸಭಾ ಸದಸ್ಯ ಎಂ.ಆರ್. ಜಗನ್ನಾಥ್ ಮನವಿ ಮಾಡಿದಾಗ, ಇದರ ಬಗ್ಗೆ ಸಭೆ ನಡೆಸಿ ತಿರ್ಮಾನ ತೆಗೆದುಕೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ತಾ.ಪಂ ಅಂಗಡಿ ಮಳಿಗೆಗಳ ಹಿಂಭಾಗದಲ್ಲೇ ಸರ್ಕಾರಿ ಶಾಲೆ ಇರುವುದರಿಂದ ಈ ಅಂಗಡಿ ಮಳಿಗೆಗಳನ್ನು ಪುರಸಭೆಗೆ ವರ್ಗಾಯಿಸಿದಲ್ಲಿ ಶಾಲೆಯ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ಮುಖ್ಯಾಧಿಕಾರಿ ಸುರೇಶ್ ಸಚಿವರಿಗೆ ಮನವಿ ಮಾಡಿದಾಗ, ತಾ.ಪಂ ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಸಂಘ ಸಂಸ್ಥೆಗಳು ಸಿಎ ನಿವೇಶನ ಮಂಜೂರು ಮಾಡಲು ಕೋರಿದ್ದು, ರಿಜಿಸ್ಟ್ರರ್ ಫೀ ಕೊಟ್ಟು ಸಿಎ ನಿವೇಶನ ಮಂಜೂರು ಮಾಡಿಕೊಳ್ಳಬಹುದು ಎಂದು ಎಸಿ ಗೋಟೂರು ಶಿವಪ್ಪ ಸಭೆಗೆ ತಿಳಿಸಿದಾಗ, ಆರ್ಥಿಕವಾಗಿ ಸದೃಡವಾಗಿರುವವರು ರಿಜಿಸ್ಟ್ರೇಶನ್ ಫೀ ಕೊಡುತ್ತಾರೆ ಆದರೆ ತಳ ಸಮುದಾಯಗಳು ಎಲ್ಲಿಂದ ಹಣ ತರುತ್ತಾರೆ. ಇದರ ಬಗ್ಗೆ ಚರ್ಚಿಸಿ ಕ್ರಮ ವಹಿಸಿ ಎಂದು ಸಚಿವರು ಸೂಚನೆ ನೀಡಿದರು.
ಮುಂದಿನ ತಿಂಗಳು ಮಧುಗಿರಿ ಪಟ್ಟಣಕ್ಕೆ ಶೃಂಗೇರಿ ಶ್ರೀಗಳು ಬರಲಿದ್ದು, ಈ ಭಾಗದಲ್ಲಿ ರಸ್ತೆಗಳನ್ನು ನಿರ್ಮಿಸಿ. ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ಸಚಿವರು ಸೂಚನೆ ನೀಡಿದರು.
ಪಟ್ಟಣದ ಟಿವಿವಿ ಪೆಟ್ರೋಲ್ ಬಂಕ್‌ಗೆ ನೀಡಿರುವ ಜಾಗವು ಪುರಸಭೆಗೆ ಸೇರಿದ್ದಾಗಿದ್ದು ಇವರು ಪಾವತಿ ಮಾಡುತ್ತಿರುವ ಗುತ್ತಿಗೆಯ ಬಾಡಿಗೆ ಕಡಿಮೆ ಇದ್ದು ಈ ಬಾಡಿಗೆಯನ್ನು ಹೆಚ್ಚಿಸುವುದರ ಜತೆಯಲ್ಲಿ ಖಾಸಗಿ ಶಾಲಾ ಕಾಲೇಜುಗಳ ಕಂದಾಯವನ್ನು ವಸೂಲಿ ಮಾಡಬೇಕೆಂದು ಎಂ.ಎಲ್. ಗಂಗರಾಜು ಸಭೆಯಲ್ಲಿ ತಿಳಿಸಿದರು.
ಯು ಜಿ ಡಿ ಕಾಮಗಾರಿಗಳು ಕೆಲವು ವಾರ್ಡ್‌ಗಳಲ್ಲಿ ಪೂರ್ಣಗೊಂಡಿದೆ ಅಲ್ಲಿನ ಪ್ರತಿ ಮನೆಗಳ ಸಂಪರ್ಕವನ್ನು ನಾಗರಿಕರೇ ಮಾಡಿಕೊಳ್ಳಬೇಕು ಹಾಗೂ ಪ್ರತಿ ಸಂಪರ್ಕಕ್ಕೆ ಡೆಪಾಜಿಟ್‌ಗಾಗಿ ೫೦೦ ರೂ.ಗಳನ್ನು ನಾಗರೀಕರು ಪಾವತಿಸಬೇಕು. ಎಸ್‌ಸಿ, ಎಸ್ಟಿ ಸಮುದಾಯಗಳ ಮನೆಗಳಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಯುಜಿಡಿ ಸಂಪರ್ಕಕ್ಕೆ ಪುರಸಭೆಯಿಂದಲೇ ನಿಗಧಿಪಡಿಸಿರುವ ಹಣವನ್ನು ಪಾವತಿ ಮಾಡಲಾಗುವುದು ಹಾಗೂ ಪ್ರತಿ ತಿಂಗಳಿಗೆ ೧೫ ರೂ. ಗಳಂತೆ ನಲ್ಲಿ ಕಂದಾಯವನ್ನು ಬಳಕೆದಾರರು ಪಾವತಿ ಮಾಡಬೇಕು ಎಂದು ಮುಖ್ಯಾಧಿಕಾರಿ ಸುರೇಶ್ ತಿಳಿಸಿದರು.
ಪುರಸಭಾ ಸದಸ್ಯ ಗೋವಿಂದರಾಜು ಮಾತನಾಡಿ, ಅಂಗಡಿಗಳ ಬಾಡಿಗೆಯ ನೆಪದಲ್ಲಿ ಕೆಲ ಅಧಿಕಾರಿಗಳು ಅಂಗಡಿ ಮಾಲೀಕರನ್ನು ತೇಜೂವಧೆ ಮಾಡುತ್ತಿರುವುದು ಸರಿಯಲ್ಲ. ಕೆಲ ಅಂಗಡಿಗಳು ಮಳೆ ಬಂದಾಗ ಮೇಲ್ಚಾವಣಿಗಳು ಸೋರುತ್ತಿವೆ. ಅವುಗಳನ್ನು ಮೊದಲು ಸರಿಪಡಿಸಿ ಹಾಗೂ ಬಾಡಿಗೆ ವಸೂಲಿಯ ಪುಸ್ತಕವನ್ನು ಸಭೆಯಲ್ಲಿ ಹಾಜರುಪಡಿಸುವಂತೆ ತಿಳಿಸಿದರು.
ಎಂ ಆರ್. ಜಗನ್ನಾಥ್ ಮಾತನಾಡಿ, ಆರ್ ಓ ವಸಂತಕುಮಾರಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬಾಡಿಗೆ ವಸೂಲಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಸದಸ್ಯರ ಜತೆ ಗೌರವದಿಂದ ವರ್ತಿಸುವುದಿಲ್ಲ ಇವರು ಸಾರ್ವಜನಿಕರ ಜತೆ ಇನ್ನೂ ಯಾವ ರೀತಿ ವರ್ತಿಸುತ್ತಾರೊ ಗೊತ್ತಿಲ್ಲ. ಇವರನ್ನು ಮೊದಲು ಇವರಿಗೆ ಬೇರೆ ಕೆಲಸಗಳನ್ನು ನೀಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಪುರಸಭಾಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತಾ ಶಂಕರ್ ನಾರಾಯಣ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಪುರಸಭಾ ಸದಸ್ಯರುಗಳು ವ್ಯವಸ್ಥಾಪಕ ಗುರುಪ್ರಸಾದ್, ಕಂದಾಯ ಅಧಿಕಾರಿ ವಸಂತಕುಮಾರಿ, ಸಮುದಾಯ ಸಂಘಟಕಿ ಬಿ.ಆರ್. ವರಲಕ್ಷ್ಮಿ, ಆರೋಗ್ಯ ನಿರೀಕ್ಷಕ ಬಾಲಾಜಿ ಮತ್ತಿತರರು ಉಪಸ್ಥಿತರಿದ್ದರು.