ಗ್ರಾಮದೇವತೆ ದೇವಸ್ಥಾನ ಉದ್ಘಾಟನೆ
ನವಲಗುಂದ ,ಏ.22: ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗ್ರಾಮದೇವತೆಯ ದೇವಸ್ಥಾನ ಉದ್ಘಾಟನೆ ಹಾಗೂ ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಭಕ್ತರ ಮಹಾಪೂರವೇ ಹರಿದು ಬಂತು ಮೆರವಣಿಗೆಯಲ್ಲಿ ಭಕ್ತರು ಅದ್ದೂರಿಯಾಗಿ ಸಂಭ್ರಮಿಸಿದರು.
ಒಂಬತ್ತು ದಿನಗಳ ಕಾಲ ವಿನೂತನ ಹಾಗೂ ವಿಭಿನ್ನ ರೀತಿಯಲ್ಲಿ ದೇವಿಯ ಆಚರಣೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಭಂಡಾರದ ಹೊನ್ನಾಟದಲ್ಲಿ ಪರಸ್ಪರ ಭಂಡಾರ ಎರಚುವ ಮೂಲಕ ಐದನೇ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದರು.
ಮಹಿಳೆಯರು, ಮಕ್ಕಳು ಪರಸ್ಪರ ಸಂಪ್ರದಾಯಿಕ ಆಟಗಳನ್ನು ಆಡುವ ಮೂಲಕ ಮೆರವಣಿಗೆಗೆ ಹೊಸ ಮೆರಗನ್ನು ತಂದಿರುವುದು ವಿಶೇಷ. ಯುವಕರು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಸಂಭ್ರಮಿಸಿರುವುದು ನೋಡುಗರ ಕಣ್ಮನ ಸೆಳೆಯುವಂತಿತ್ತು.
ಯಾವುದೇ ಜಾತಿ ಮತಗಳ ಭೇದ ಭಾವವಿಲ್ಲದೇ ಭಂಡಾರದ ಹೊನ್ನಾಟದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ, ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.