ಡಾ.ಬಾಬಾಸಾಹೇಬ್ ಅಂಬೇಡ್ಕರ್ ತತ್ವಗಳ ಅಳವಡಿಕೆಯಿಂದ ರಾಷ್ಟ್ರದ ಅಭಿವೃದ್ಧಿ
ಕಲಬುರಗಿ: ಏ.22:ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ತಲ-ತಲಾಂತರಗಳಿಂದ ಗುಲಾಮಗಿರಿಯಲ್ಲಿ ಜೀವನ ಸಾಗಿಸುತ್ತಾ, ನೋವನ್ನು ಹೇಳಿಕೊಳ್ಳದೆ ಮೂಕರೋಧನೆಯನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಭಾಗ್ಯವಿಧಾತನಾಗಿ ಉದಯಿಸಿ, ದೀನ-ದಲಿತ, ಶೋಷಿತ, ಅಸಹಾಯಕರ ಬಾಳಿಗೆ ಬೆಳಕಾದರು. ವಿಶ್ವದ ಶ್ರೇಷ್ಟ ಸಂವಿಧಾನವನ್ನು ರಚಿಸಿ, ಸರ್ವರಿಗೂ ನ್ಯಾಯವನ್ನು ಒದಗಿಸಿಕೊಟ್ಟ ಅವರು ಒಬ್ಬ ವ್ಯಕ್ತಿಯಾಗಿರದೆ, ದೇಶದ ಮಹಾನ ಶಕ್ತಿಯಾಗಿದ್ದಾರೆ. ಅವರ ತತ್ವ, ಸಂವಿಧಾನದ ಅಳವಡಿಕೆಯಿಂದ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದು ಎಮ್ಮೆಲ್ಸಿ ಶಶೀಲ್ ಜಿ.ನಮೋಶಿ ಹೇಳಿದರು.
ನಗರದ ಎಂ.ಜಿ.ರಸ್ತೆಯ ದರ್ಶಾನಪುರ ಬಡೆಪುರ ಜಿಡಿಎ ಲೇಔಟ್‍ನ ಸ್ಲಂ ಕಾಲನಿಯಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘ’ದ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರ 133 ಹಾಗೂ ಡಾ.ಬಾಬು ಜಗಜೀವನರಾಮ್‍ರ 117ನೇ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸೇವಕ, ಜನಪರ ಹೋರಾಟಗಾರ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಡಾ.ಬಾಬಾಜಿ-ಬಾಬೂಜಿ ದೇಶದ ಎರಡು ಕಣ್ಣುಗಳಿದ್ದಂತೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಬೇಕಾದ ಸಂವಿಧಾನ ಮತ್ತು ಕಾನೂನುಗಳನ್ನು ರಚಿಸಿ, ದೇಶ ಕಟ್ಟುವ ಕಾರ್ಯ ಮಾಡಿದ್ದಾರೆ. ಡಾ.ಬಾಬು ಜಗಜೀವನರಾಮ್ ಅವರು ದೇಶದ ಹಸಿರು ಕ್ರಾಂತಿಯ ಹರಿಕಾರರಾಗಿ ಕೃಷಿ ಕ್ಷೇತ್ರ ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇಂಥಹ ಮಹನೀಯರನ್ನು ಕೇವಲ ಜಯಂತಿ ಆಚರಣೆಗೆ ಮಾತ್ರ ಸೀಮಿತಗೊಳಿಸಿದೆ, ಅವರು ನೀಡಿರುವ ತತ್ವಗಳನ್ನು ಅಳವಡಿಸಿಕೊಂಡು, ಸಮಾಜಕ್ಕೆ ಕೊಡುಗೆಯನ್ನು ನೀಡುವುದು ಅಗತ್ಯವಾಗಿದೆ ಎಂದು ಮರ್ಮಿಕವಾಗಿ ನುಡಿದರು.
ಮುಖಂಡರಾದ ಚಂದ್ರಿಕಾ ಪರಮೇಶ್ವರ, ಶಾಮ ನಾಟಿಕಾರ, ಸಮಾಜ ಸೇವಕ ಎಚ್.ಬಿ.ಪಾಟೀಲ, ಪ್ರಮುಖರಾದ ಮಂಜುನಾಥ ನಾಲವಾರಕರ್, ಪರಮೇಶ್ವರ, ಯಲ್ಲಪ್ಪ ಡಿ. ಅಲ್ದರ್ಥಿ, ರಾಗಮ್ಮ ಇನಾಮದಾರ್, ವಿಶಾಲ್ ನವರಂಗ್, ಲಿಂಗರಾಜ ತಾರಪೈಲ್, ಹರಿಕೃಷ್ಣ ವೈ.ಜಾಲಹಳ್ಳಿ, ಶ್ರೀಧರ ಸರವಾಳ, ನರೇಶ್ ಎಸ್.ಕಟಕೆ, ವಿಜಯಕುಮಾರ ಕಟ್ಟಿಮನಿ, ರವಿ ದಿಗ್ಗಾಂವಿ, ಸಂದೀಪ ಭರಣಿ, ಸುನೀಲ್ ಶಿರಸಗಿ, ಅರುಣ ಗಾಜರೆ, ಧರ್ಮರಾಜ ಶಹಾಪುರಕರ್, ಶಿವಕುಮಾರ ಟೆಂಗಳಿ, ಜಗನಾಥ, ಚಂದ್ರಕಾಂತ ದೇಕುನ್, ಮಂಜು ಜಗದೂರ, ವಿಶ್ವನಾಥ ದೇಕುನ್, ಪರಶುರಾಮ(ಪಪ್ಪು), ರಾಜು ಸರಡಗಿ, ಮಹಾಂತೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಯಂತಿ ಉತ್ಸವಕ್ಕಾಗಿ ಶ್ರಮಿಸಿದ ಯುವಕರು ಮತ್ತು ಮಹಿಳೆಯರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಪ್ರಸಾದ ವಿತರಣೆ ಮಾಡಲಾಯಿತು.