ನನ್ನ ಸಾಧನೆಗೆ ಪೋಷಕರೇ ಪ್ರೇರಣೆ
ಕೋಲಾರ,ಏ.೨೨- ಪ್ರತಿಯೊಬ್ಬರ ಸಾಧನೆಗೆ ಪೋಷಕರ ಪಾತ್ರ ಮಹತ್ವದ್ದು. ಅವರೇ ನಮ್ಮ ಸಾಧನೆಗೆ ಪ್ರೇರಣೆ ಎಂದು ಯುಪಿಎಸ್ಸಿಯಲ್ಲಿ ೧೬೦ನೇ ರ್‍ಯಾಂಕ್ ಪಡೆದಿರುವ ನಾಗೇಂದ್ರ ಬಾಬು ಕುಮಾರ್ ತಿಳಿಸಿದರು.
ನಗರದ ಹೊರವಲಯದ ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಧಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಣ ಕಳೆದುಕೊಂಡರೆ ಏನೂ ಸಮಸ್ಯೆ ಇಲ್ಲ. ವಾಪಸ್ ಪಡೆಯಬಹುದು. ಆರೋಗ್ಯ ಕಳೆದುಕೊಂಡರೆ ಏನೋ ಸ್ವಲ್ಪ ಕಳೆದುಕೊಂಡಂತೆ. ಆದರೆ, ಚಾರಿತ್ರ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಎಂಬ ಪ್ರಸಿದ್ಧ ತತ್ವಜ್ಞಾನಿಯ ಮಾತು ನೆನಪಿಸಿಕೊಂಡು ಬದುಕುಬೇಕು ಎಂದರು.
ನಾನು ವೈದ್ಯರಾಗಬೇಕೆಂಬ ಆಸೆ ತಂದೆಯದ್ದಾಗಿತ್ತು. ಆದರೆ, ನನಗೆ ಐಎಎಸ್ ಆಗಬೇಕೆಂಬ ಆಸೆ ಇತ್ತು. ಪಿಯುಸಿ ಬಳಿಕ ಎಂಜಿನಿಯರ್ ಮಾಡಿದೆ. ಡಿ.ಕೆ.ರವಿ ಕಾರ್ಯವೈಖರಿ ನನ್ನನ್ನು ಮತ್ತಷ್ಟು ಉತ್ತೇಜಿಸಿತು. ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಮನೋಜ್ ಕುಮಾರ್ ಮೀನಾ, ಸೆಲ್ವಮಣಿ ಅವರೆಲ್ಲಾ ನನಗೆ ಸ್ಫೂರ್ತಿ ಎಂದು ಹೇಳಿದರು.
ನಮ್ಮ ಸಾಧನೆ ಹಾದಿಯಲ್ಲಿ ಸ್ವಲ್ಪ ಜನ ಸಹಕಾರ ನೀಡುತ್ತಾರೆ. ಕೆಲವರು ಕಾಲು ಎಳೆಯುತ್ತಾರೆ. ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅವರನ್ನು ಶತ್ರು ಎಂದು ಪರಿಗಣಿಸಬಾರದು ಎಂದು ನುಡಿದರು.
ಕಾಲೇಜಿನ ಕಾರ್ಯದರ್ಶಿ ಕುಲಕರ್ಣಿ, ಪ್ರಾಂಶುಪಾಲ ರವಿಕುಮಾರ್, ಉಪಾಧ್ಯಕ್ಷ ಮಾರುತಿ, ಬದರೀನಾಥ್, ವಿನಯ್, ನಾಗೇಂದ್ರ ಬಾಬು, ಪೋಷಕರಾದ ಟಿ.ಎನ್.ನಾರಾಯಣಪ್ಪ, ಸುನಂದಮ್ಮ, ಚಿಕ್ಕಮ್ಮ ಪದ್ಮಾ ಹಾಗೂ ವಿದ್ಯಾರ್ಥಿಗಳು ಇದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು.