ಗ್ಯಾರಂಟಿಗಳಿಂದ ಜೀವನ ಮಟ್ಟ ಸುಧಾರಣೆ
ರಾಮನಗರ,ಏ.೨೨- ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಿದ್ದು, ಶಾಶ್ವತ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಡಿ.ಕೆ.ಸುರೇಶ್ ಅವರಿಗೆ ಮತ ನೀಡುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಲಾಗುತ್ತಿದೆ ಎಂದು ಮಹಿಳಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷೆ ಡಾ.ದೀಪಾಮುನಿರಾಜು ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಾದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ಜನರ ಪರವಾಗಿದ್ದು, ಅದಕ್ಕೆ ಪೂರಕವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಪ್ರಣಾಳಿಕೆಯಲ್ಲಿನ ಅಂಶಗಳು ಜನರ ಜೀವನಮಟ್ಟ ಸುಧಾರಿಸಲಿವೆ. ಇದನ್ನು ಸಹಿಸಲಾಗದ ವಿರೋಧ ಪಕ್ಷಗಳು ಗ್ಯಾರಂಟಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ, ಮಧ್ಯಮ ವರ್ಗದವರ ಬದುಕು ಸುಧಾರಿಸುವುದು ಮುಖ್ಯವಲ್ಲ ಎನ್ನುವುದನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ಸ್ಪಷ್ಟಪಡಿಸಿವೆ ಎಂದು ವಿರುದ್ದ ಕಿಡಿಕಾರಿದರು.
ಶಕ್ತಿ ಯೋಜನೆಯು ಪ್ರತಿ ಮನೆಯ ಮಹಿಳೆಯರಿಗೆ ಆಶಾಕಿರಣವಾಗಿದೆ. ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ
ಮಹಿಳೆಯರಿಗೆ ನೀಡಿರುವ ಆದ್ಯತೆಗೆ ನಾವು ಚಿರಋಣಿಯಾಗಿರುತ್ತೇವೆ. ಪ್ರಮುಖವಾಗಿ ಮೂರು ಅವಧಿಯಲ್ಲಿ ಸಂಸದರಾಗಿ ಡಿ.ಕೆ.ಸುರೇಶ್ ಅವರು ನರೇಗಾ, ವಿದ್ಯುತ್ ಸಬ್‌ಸ್ಟೇಷನ್‌ಗಳ ಸ್ಥಾಪನೆ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ೮೩ ಬಸ್ ತಂಗುದಾಣಗಳ ನಿರ್ಮಾಣ, ೫೪೦ ಕೋಟಿ ರೂಗಳ ವೆಚ್ಚದಲ್ಲಿ ಸತ್ತೆಗಾಲದಿಂದ ಕೆರೆ ತುಂಬಿಸುವುದು. ಅರ್ಕಾವತಿ ನದಿಗೆ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ವೃದ್ದಿಗೆ ಕ್ರಮವಹಿಸಿದ್ದು ಸೇರಿದಂತೆ ನೂರಾರು ಅಭಿವೃದ್ದಿ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುವ ಮೂಲಕ ಕ್ಷೇತ್ರದಲ್ಲಿ ಮಾದರಿಯಾಗಿವೆ. ಸಂಸದರಾಗಿ ಹಳ್ಳಿಗಳಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಆಲಿಸಿ ಬಗೆಹರಿಸಿದ ಏಕೈಕ ಸಂಸದರೆನಿಸಿಕೊಂಡಿದ್ದಾರೆ. ಆಗಾಗಿ ಅವರನ್ನು ನಾಲ್ಕನೇ ಬಾರಿಗೆ ಹೆಚ್ಚು ಮತಗಳನ್ನು ಕೊಟ್ಟು ಆಯ್ಕೆ ಮಾಡುವ ಸಂಕಲ್ಪವನ್ನು ಎಲ್ಲ ಮಹಿಳೆಯರು ಮಾಡಿರುವುದಾಗಿ ಹೇಳಿದರು.
ರಾಜ್ಯದಲ್ಲಿ ೨ ಬಾರಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿರವರ ಕೈಯಲ್ಲಿ ಏಕೆ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಪ್ರಶ್ನೆಯನ್ನು ಸ್ವತಃ ಜನರೇ ಕೇಳುತ್ತಿದ್ದಾರೆ. ಡಿ.ಕೆ.ಸುರೇಶ್ ರವರು ಕೇವಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಷ್ಟೇ ಅಲ್ಲದೆ ನಮ್ಮ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತಿ ಕನ್ನಡ ನಾಡಿನ ತೆರಿಗೆ ಹಣವನ್ನು ಭಾರತಕ್ಕೆ ಹಂಚಿ ನಮ್ಮ ರಾಜ್ಯಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಕನ್ನಡಿಗರ ಗೌರವ ಕಾಪಾಡಿದ್ದಾರೆ. ಇಂತಹ ನಾಡಿನ ಜನರ ಬಗ್ಗೆ ಕಾಳಜಿ ಇರುವ ಡಿ.ಕೆ.ಸುರೇಶ್ ರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಸಿ.ಪಾರ್ವತಮ್ಮ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಮಂಗಳಮ್ಮಶಂಭೂಗೌಡ, ವನಜಾ, ರೇಣುಕಮ್ಮ, ಉಷಾರಾಣಿ, ಮಹಿಳಾ ಬ್ಲಾಕ್ ಅಧ್ಯಕ್ಷರುಗಳಾದ ಶೋಭಾ, ನಾಗಮ್ಮ, ರೇಣುಕಮ್ಮ, ಜಯಶೀಲಾ, ರೂಪ, ಕನಕಪುರ ರೂಪ, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಸದಸ್ಯರಾದ ಆಯಿಷಾಬಾನು, ಜಯಲಕ್ಷ್ಮಮ್ಮ, ಗಿರಿಜಮ್ಮ ಸೇರಿದಂತೆ ಮಹಿಳಾ ಮುಖಂಡರು ಇದ್ದರು.