ಯದುವೀರ್ ಒಡೆಯರ ಗೆಲುವಿಗೆ ಒಡತಿಯರ ಸೇವೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.22:- ಬಿಜೆಪಿಯ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ ಗೆಲುವಿಗೆ ಮೈಸೂರು ಬಿಜೆಪಿ ಮಹಿಳಾ ಮೋರ್ಚಾ ಹಾಗೂ ವಿವಿಧ ಸಂಘಟನೆಗಳ ಜತೆಗೂಡಿ ಚಾಮುಂಡಿ ಬೆಟ್ಟ ಹತ್ತಿ ಮಹಿಳೆಯರು ಹರಕೆ ಕಟ್ಟಿಕೊಂಡರು.
ಭಾನುವಾರ ಮುಂಜಾನೆ 6.30ಕ್ಕೆ ಚಾಮುಂಡಿ ಬೆಟ್ಟದ ಪಾದದ ಬಳಿಗೆ ಆಗಮಿಸಿದ ನಗರದ ವಿವಿಧ ಮಹಿಳಾ ಸಂಘ ಸಂಸ್ಥೆಗಳ ಸಾವಿರಾರು ಮಹಿಳೆಯರು ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾದ ಹೇಮಾ ನಂದೀಶ್ ನೇತೃತ್ವದಲ್ಲಿ ಸಾವಿರ ಮೆಟ್ಟಿಲು ಹತ್ತಿದರು.
`ನಮ್ಮ ನಡಿಗೆ ವಿಜಯದ ಕಡೆಗೆ, ಮತ್ತೊಮ್ಮೆ ಮೋದಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಮೈಸೂರು ಮತ್ತು ಕೊಡಗು ಲೋಕಸಭಾ ಮಹಿಳಾ ಕಾರ್ಯದ ಸಂಚಾಲಕಿ ಹೇಮಾ ನಂದೀಶ್ ಮಹಿಳಾ ಸಬಲೀಕರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದ್ಯತೆ ನೀಡಿ ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದ ಗ್ಯಾರಂಟಿಗಳಿಗೆ ವ್ಯಾರಂಟಿ ಇಲ್ಲದೆ ಆಗಲಿದೆ. ಸದೃಢ ಮಹಿಳಾ ಭಾರತಕ್ಕಾಗಿ ಮೋದಿ ತಂದ ಯೋಜನೆಗಳು ಸಕಾರಗೊಂಡು ಮೈಸೂರಿನಲ್ಲೂ ಯಧುವೀರ್ ಗೆಲ್ಲಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಸ್.ಎ.ರಾಮದಾಸ್, ನಗರಾಧ್ಯಕ್ಷ ಎಲ್.ನಾಗೇಂದ್ರ, ಸುರೇಶ್ ಬಾಬು, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಜಿ.ಗಿರಿಧರ್, ರಶ್ಮಿ, ಕಾವೇರಿ, ಸವಿತಾ ಘಾಟ್ಕೆ, ಉಮಾ ಜಾದವ್, ನಳಿನಿ, ಮಮತಾ ಚಂದ್ರಶೇಖರ್, ಇಂದ್ರ ಹಾಗೂ ಇನ್ನಿತರ ಮಹಿಳಾ ಸಂಘಟನೆಗಳ ಭಾಗವಹಿಸಿದ್ದರು.