ಕಾಂಗ್ರೆಸ್ 50 ಸೀಟು ದಾಟಲ್ಲ: ಬಿ.ವೈ.ವಿಜಯೇಂದ್ರ
ಸಂಜೆವಾಣಿ ನ್ಯೂಸ್
ಮೈಸೂರು: ಏ.22:- ಕಾಂಗ್ರೆಸ್‍ನ ಜಾಹೀರಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ 50 ಸೀಟು ಸಹ ದಾಟುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಾದ್ದರಿಂದ ಅವರ ಪ್ರಣಾಳಿಕೆ ಗ್ಯಾರಂಟಿ ಯಾವುದೇ ಕಾರಣಕ್ಕೂ ಜಾರಿಯಾಗುವುದಿಲ್ಲ. ಅವರು ಏನಾದರೂ ಜಾಹೀರಾತು ಕೊಟ್ಟುಕೊಳ್ಳಲಿ. ಈ ಬಾರಿ ಜನ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುತ್ತಾರೆ ಎಂದರು.
ರೈತರ ಸಾಲ ಮನ್ನಾ ಹಾಗೂ ಕಾಂಗ್ರೆಸ್ ಹೊಸ ಗ್ಯಾರಂಟಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಯಾವುದನ್ನೂ ಪೂರೈಸುವುದಿಲ್ಲ. ಅವರು ಅಧಿಕಾರಕ್ಕೆ ಬಂದರೆ ತಾನೇ ಮಾಡುವುದು ಎಂದು ಹೇಳಿದರು.
ದುರಹಂಕಾರದ ಹೇಳಿಕೆ ಸರಿಯಲ್ಲ: ನೇಹ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ದುರಂಹಕಾರದ ಹೇಳಿಕೆಗಳನ್ನು ಯಾರು ಕೂಡ ಸಹಿಸುವುದಿಲ್ಲ. ಗಂಭೀರವಾದ ಘಟನೆ ನಡೆದಿದೆ. ಆದರೂ, ವೈಯುಕ್ತಿಕ ವಿಚಾರಕ್ಕೆ ಕೊಲೆಯಾಗಿದೆ ಎಂದು ಗೃಹ ಸಚಿವರು ಹೇಳುತ್ತಾರೆ. ಇದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಸಚಿವರು ಒಂದು ಕೋಮನ್ನು ಓಲೈಸಲು ಮುಂದಾಗಿದ್ದಾರೆ. ಆದರೆ, ಪೆÇೀಷಕರು ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಅವರಿಗೆ ಸಾಂತ್ವಾನ ಹೇಳಬೇಕು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಬೇಕು. ಬಿಜೆಪಿ ಚುನಾವಣೆಯನ್ನು ಬದಿಗಿಟ್ಟು ಹೋರಾಟ ಮಾಡುತ್ತಿದೆ. ನೇಹಾ ಪೆÇೀಷಕರೇ ಈ ಘಟನೆ ಹಿಂದೆ ಲವ್ ಜಿಹಾದ್ ಇದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ ಅಂಥ ಜನರು ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ರಾಜ್ಯದ ಜನರು ಉತ್ತರ ಕೊಡುತ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.
ಬಡಿಗೆ ಏಟು ಗ್ಯಾರಂಟಿ: ಗ್ಯಾರೆಂಟಿ ನಿಲ್ಲಿಸಿದರೆ ಜನರೇ ಬಡಿಗೆ ತೆಗೆದುಕೊಂಡು ಸರ್ಕಾರವನ್ನು ಬಡಿಯುತ್ತಾರೆ, ಎಚ್ಚರವಿರಲಿ ಎಂದ ವಿಜಯೇಂದ್ರ, ಗ್ಯಾರಂಟಿ ಹೆಸರು ಹೇಳಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ಕೇಳುತ್ತಿರುವುದು ಈ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ಆಗಿವೆ ಹೇಳಲಿ. ಒಂದೇ ಒಂದು ನಯಾ ಪೈಸೆ ಬಿಡುಗಡೆ ಆಗಿದೆಯಾ? ನನ್ನ ಪ್ರಶ್ನೆ ಅದು ಎಂದು ಕೇಳಿದರು.
ಮೋದಿ ರಾಜ್ಯ ಭೇಟಿ ವೇಳೆ ರಸ್ತೆಗಿಳಿದು ನಲಪಾಡ್ ಚೊಂಬು ಪ್ರದರ್ಶನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆ ಮುಗಿದ ಮೇಲೆ ನಲಪಾಡ್ ಹಾಗೂ ಕಾಂಗ್ರೆಸ್ ನಾಯಕರಿಗೆ ಅದೇ ಪರಿಸ್ಥಿತಿ ಬರಲಿದೆ. ಫಲಿತಾಂಶ ಬಂದ ನಂತರ ಅವರು ಚೊಂಬು ಹಿಡಿದುಕೊಂಡು ಹೋಗುವ ಸ್ಥಿತಿ ಬರುತ್ತದೆ ಎಂದು ಸೂಚ್ಯವಾಗಿ ಹೇಳಿದರು. ಇಂದು ಭಾರತೀಯ ಜನತಾ ಪಾರ್ಟಿಯ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜೇಂದ್ರ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಡಾ ರಾಮಕೃಷ್ಣಪ್ಪ ರಸ್ತೆ ಬೂತ್ ನಂಬರ್ 232 ಮತ್ತು 233ರಲ್ಲಿ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ, ನಗರಪಾಲಿಕಾ ಮಾಜಿ ಸದಸ್ಯೆ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್, ಆರ್.ಪರಮೇಶ್, ಮೈಕಾ ಪ್ರೇಮ್‍ಕುಮಾರ್, ರಾಜೇಂದ್ರ, ವಿಜ್ಞೇಶ್ವರ ಭಟ್, ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.