ಬನ್ನೂರು ಕೆ.ರಾಜು ಸಾತ್ವಿಕ ಚಿಂತನೆಯ ಸಾಹಿತಿ: ಡಾ.ಶಿವರಾಜಪ್ಪ
ಸಂಜೆವಾಣಿ ನ್ಯೂಸ್
ಮೈಸೂರು: ಏ.22:- ಸಾಹಿತಿ, ಕವಿ, ಪತ್ರಕರ್ತ ಬನ್ನೂರು ಕೆ.ರಾಜು ಅವರು ಸಾತ್ವಿಕ ಚಿಂತನೆಯ ಸಂತನಂಥ ಮನಸ್ಸಿನ ಜನಮುಖಿ ಸಾಹಿತಿ ಎಂದು ಬಣ್ಣಿಸಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಶಿವರಾಜಪ್ಪ , ಅವರು ಎಲೆ ಮರೆಕಾಯಿ ರೀತಿ ಇದ್ದುಕೊಂಡೇ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದರೂ ಅವರನ್ನು ನಾಡು ಸರಿಯಾದ ರೀತಿ ಗುರುತಿಸದಿರುವುದು ದುರಂತ ಎಂದು ಬೇಸರ ವ್ಯಕ್ತ ಪಡಿಸಿದರು.
ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ.ರಾಜು ಅವರಿಗೆ ಅರುವತ್ತು ವಸಂತಗಳು ತುಂಬಿದ ಹಿನ್ನಲೆಯಲ್ಲಿ ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಾಜು ಅವರ ಸ್ನೇಹಿತರು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಚ್ಚೆಸ್ಕೆ ಎಂಬ ಮೂರಕ್ಷರ ಮಾತ್ರದಿಂದಲೇ ನಾಡಿನಾದ್ಯಂತ ಹೆಸರಾಗಿದ್ದ ಸುಪ್ರಸಿದ್ಧ ಸಾಹಿತಿ,
ಕವಿ, ವಿಮರ್ಶಕ, ಅಂಕಣಕಾರ ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ನಂತರ ಅಂಕಣ ಬರಹವೂ ಸೇರಿದಂತೆ ಸಾಹಿತ್ಯದ ಬಹುತೇಕ ಎಲ್ಲ ಪ್ರಾಕಾರಗಳಲ್ಲೂ, ಎಲ್ಲಾ ಮಗ್ಗುಲಿನಲ್ಲೂ ಸಾಹಿತ್ಯ ಕೃಷಿ ಮಾಡಿ ಎಚ್ಚೆಸ್ಕೆ ಅವರಂಥ ಮಹಾನ್ ಸಾಹಿತಿಯ ಸ್ಥಾನವನ್ನು ಅಲಂಕರಿಸಿದವರು ಬನ್ನೂರು ರಾಜು ಅವರೆಂದರು.
ಬನ್ನೂರು ರಾಜು ಅವರು ನೂರಾರು ಕೃತಿಗಳನ್ನು ರಚಿಸಿದ್ದಾರೆ. ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ಒಂದು ರೀತಿ ಅವರು ಬರೆಯದ ಸಾಹಿತ್ಯವೇ ಇಲ್ಲವೆನ್ನ ಬಹುದು. ಅವರ ಜೀನ್ಸ್ ನಲ್ಲಿಯೇ ಅವರಿಗೆ ಸಾಹಿತ್ಯ ಒಲಿದು ಬಂದಿದೆ. ಅವರು ತಮ್ಮ ಬರವಣಿಗೆಯ ಮೂಲಕ ಸಮಾಜದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನೂ ಮಾಡುತ್ತಿದ್ದಾರೆ. ಓರ್ವ ವ್ಯಕ್ತಿ ಎಂಬತ್ತು , ತೊಂಬತ್ತು , ನೂರು ವರ್ಷಗಳಲ್ಲಿ ಸಮಾಜಕ್ಕೆ ಕೊಡಬೇಕಾಗಿರುವುದನ್ನು ಅವರು ಕೇವಲ ಅರುವತ್ತು ವರ್ಷದಲ್ಲಿಯೇ ಕೊಟ್ಟಿದ್ದಾರೆ. ಇವರ ಯಶಸ್ಸಿಗೆ ಮಡದಿ ಮಹಾಲಕ್ಷ್ಮಿ, ಪುತ್ರ ಧನುಷ್ ಜೊತೆಯಾಗಿದ್ದಾರೆ. ಸಾಹಿತ್ಯ ಇವರ ಜೀವಾಳವಾದರೆ ಸರಳತೆ ಇವರ ಜೀವನವಾಗಿದೆ.ನಾಡಿನ ಪ್ರಸಿದ್ಧ ಸಾಹಿತಿಗಳ ಸಾಲಿನಲ್ಲಿದ್ದರೂ ಇವರು ಎಂದೂ ಕೂಡ ಅಹಂ ಪಟ್ಟವರಲ್ಲ ಎಂದ ಅವರು, ಬನ್ನೂರು ರಾಜು ಅವರಲ್ಲಿ ಪ್ರತಿಯೊಂದು ಕ್ಷೇತ್ರಗಳ ಮಾಹಿತಿಯೂ ಅಡಕವಾಗಿದ್ದು ಅವರೊಂದು ಜ್ಞಾನ ಭಂಡಾರ ವಾಗಿ ನಮ್ಮ ನಡುವೆ ಇದ್ದು ಅಕ್ಷರ ತಪಸ್ವಿಯಾಗಿ ಜ್ಞಾನ ಹಂಚುತ್ತಲೇ ನಾಡಿನ ಮನೆ ಮಾತಾಗಿದ್ದಾರೆ. ಇಂತಹ ಪ್ರತಿಭಾ ಸಂಪನ್ನರನ್ನು ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಅಭಿನಂದಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯವೆಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಸುಪ್ರಸಿದ್ಧ ಸಾಹಿತಿ ಹಾಗೂ ಸುವಿಖ್ಯಾತ ಸಂಸ್ಕೃತ ವಿದ್ವಾಂಸರಾದ ಡಾ.ಕೆ.ಲೀಲಾ ಪ್ರಕಾಶ್ ಅವರು ಬನ್ನೂರು ರಾಜು ಅವರ ಬದುಕು, ಬರಹ, ಸಾಧನೆ, ಸಿದ್ಧಿ ಕುರಿತಂತೆ ಸುದೀರ್ಘವಾಗಿ ಮಾತನಾಡಿದರು.ಸಮಾರಂಭದ ಸಾನ್ನಿಧ್ಯವನ್ನು ಮೈಸೂರಿನ ಶ್ರೀ ಹೊಸ ಮಠದ ಅಧ್ಯಕ್ಷರಾದ ಶ್ರೀ ಚಿದಾನಂದ ಮಹಾಸ್ವಾಮೀಜಿ ವಹಿಸಿದ್ದರಲ್ಲ ದೆ ಆಶೀರ್ವಚನ ನೀಡಿ ಸಮಸ್ತ ಕನ್ನಡಿಗರ ಪರವಾಗಿ ಬನ್ನೂರು ರಾಜು ಮತ್ತು ಮಹಾಲಕ್ಷ್ಮಿ ದಂಪತಿಗಳನ್ನು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲಪುಷ್ಪ ತಾಂಬೂಲದೊಡನೆ ಅಭಿನಂದಿಸಿ ಗೌರವಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಮಾಜ ಸೇವಕ, ಸಂಸ್ಕೃತಿ ಚಿಂತಕ ಡಾ.ರಘುರಾಮ್ ವಾಜಪೇಯಿ ಮಾತನಾಡಿ, ಮೈಸೂರಿನ ಮಾಣಿಕ್ಯದಂತಿ ರುವ ಬನ್ನೂರು ಕೆ.ರಾಜು ಸಾಹಿತ್ಯ ಕೃಷಿಯನ್ನೇ ಉಸಿರಾಗಿಸಿಕೊಂಡವರು, ಅವರನ್ನು ಪುರುಷ ಸರಸ್ವತಿ ಎಂದರೂ ತಪ್ಪಾಗದು. ಅಷ್ಟರ ಮಟ್ಟಿಗೆ ತಾಯಿ ಸರಸ್ವತಿ ಅವರಿಗೆ ಒಲಿದಿದ್ದಾರೆಂದ ಅವರು ಬನ್ನೂರು ಕೆ.ರಾಜು ಅವರು ಬರೀ ಸಾಹಿತಿಯಷ್ಟೇ ಆಗಿರದೆ ಒಂದು ರೀತಿ ಸರ್ವ ವಿಷಯಗಳ ಸಂಪನ್ಮೂಲ ವ್ಯಕ್ತಿ ಆಗಿದ್ದು ನಾವೆಲ್ಲ ಅವರನ್ನು ಗೂಗಲ್ ಆಫ್ ಮೈಸೂರ್ ಎಂದೇ ಕರೆಯುತ್ತೇವೆಂದು ತಿಳಿಸಿದರು.
ಒಂದು ಕಾಲದಲ್ಲಿ ಬನ್ನೂರು ರಾಜು ಅವರು ಖ್ಯಾತ ಚಲನ ಚಿತ್ರನಟ ಅಂಬರೀಶ್ ರ ಒಡನಾಡಿಗಳಲ್ಲೊಬ್ಬರಾಗಿದ್ದು ಅಖಿಲ ಭಾರತ ಅಂಬರೀಶ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಹಾಗಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂಬರೀಶ್ ಅಭಿಮಾನಿಗಳು ಗಣ್ಯರೊಡಗೂಡಿ ಸಾಹಿತಿ ಬನ್ನೂರು ಕೆ.ರಾಜು ಹಾಗೂ ಅವರ ಪತ್ನಿ ಮಹಾಲಕ್ಷ್ಮೀ ಅವರನ್ನು ವಿಶೇಷವಾಗಿ ಅಭಿನಂದಿಸಿದರು.
ಪ್ರಾರಂಭದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಬಿಗ್ ಬಾಸ್ ಖ್ಯಾತಿಯ ಮಾತನಾಡುವ ಗೊಂಬೆ ಕಲಾವಿದೆ ಸುಮಾ ರಾಜ್ ಕುಮಾರ್ ಇಡೀ ಕಾರ್ಯಕ್ರಮವನ್ನು ಅಚ್ಚುಟ್ಟಾಗಿ ನಿರೂಪಣೆ ಮಾಡಿದರು. ಹುಲಿದುರ್ಗ ಚಲನಚಿತ್ರ ಖ್ಯಾತಿಯ ಉದಯೋನ್ಮುಖ ನಾಯಕನಟ ಸುಪ್ರೀತ್ , ಬೆಂಗಳೂರಿನ ನ್ಯಾಯ ನೀತಿ ಧರ್ಮ ಡಾ.ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ರೆಬಲ್ ರಮೇಶ್ ಗೌಡ, ಹೆಚ್.ಎನ್.ಸ್ವಾಮಿ, ಕೆ.ಆರ್. ಪೇಟೆ ರೆಬಲ್ ಜಬಿ, ಜಿ.ಕೆ.ಕುಮಾರ್ ಗೌಡ, ನಾಗೇಂದ್ರಗೌಡ ಹುನುಗನಹಳ್ಳಿ, ಎಸ್.ಕೆ.ಕುಮಾರ್ ನಾಯಕ್, ವಿಶ್ರಾಂತ ಐಎಎಸ್ ಅಧಿಕಾರಿ ಪಿ.ಬೋರೇ ಗೌಡ, ಪತ್ರಕರ್ತರ ಸಂಘದ ಸುಬ್ರಹ್ಮಣ್ಯ , ರಾಘವೇಂದ್ರ, ಕಿರಣ್ ಕುಮಾರ್, ರಂಗಸ್ವಾಮಿ, ಸಮಾಜ ಸೇವಕಿ ವಿದ್ಯಾ, ಉದ್ಯಮಿ ರವಿಕುಮಾರ್, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಎನ್.ಕೆ.ಕಾವೇರಿಯಮ್ಮ, ಕನ್ನಡ ಹೋರಾಟಗಾರರಾದ ಮೂಗೂರು ನಂಜುಂಡ ಸ್ವಾಮಿ, ಎಸ್.ಬಾಲಕೃಷ್ಣ , ನಾಲಾಬೀದಿ ರವಿ, ಹೂಟಗಳ್ಳಿರಾಜಶೇಖರ್, ಜನಪದ ವಿದ್ವಾಂಸ ಕ್ಯಾತನಹಳ್ಳಿ ಪ್ರಕಾಶ್, ಮಾಲಿನಿ ಪಾಲಾಕ್ಷ, ಉತ್ತನಹಳ್ಳಿ ಮಹದೇವ್, ಒಕ್ಕಲಿಗರ ಸಂಘದ ವಸಂತ ಮನೀಷ್, ಎಲ್‍ಐಸಿ ಸಿದ್ದಪ್ಪ , ಗೋವಿಂದರಾಜು, ಚುಟುಕು ಸಾಹಿತ್ಯ ಪರಿಷತ್ತಿನ ಎಂಜಿಆರ್ ಅರಸ್, ರತ್ನ ಹಾಲಪ್ಪಗೌಡ, ಕವಿ ವಿ.ನಾರಾಯಣರಾವ್, ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳ ಚರಂಡಿ ಕಾರ್ಮಿಕರ ಸಂಘದ ಮಹೇಶ್ ಎಸ್.ಜಯನಗರ, ಎಂ .ರವಿಕುಮಾರ್, ಚಂದ್ರೇಗೌಡ, ಕಾಳೇಗೌಡ ಮುಂತಾದವರು ಭಾಗವಹಿಸಿದ್ದರು.