ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ: ಮಹೇಶ್‍ಕುಮಾರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.22- ಲೋಕಸಭಾ ಸಾರ್ವತ್ರಿಕ ಚುನಾಣೆ ಅಂಗವಾಗಿ ಇದೇ ಏಪ್ರಿಲ್ 26 ರಂದು ಎಲ್ಲಾ ವಯಸ್ಕ ಮತದಾರರು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಅವರು ತಿಳಿಸಿದರು.
ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಯುಕ್ತ ಯಳಂದೂರು ಪಟ್ಟಣದಲ್ಲಿರುವ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಆಯೋಜಿಸಿ ಮತದಾನ ಜಾಗೃತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಬಾರಿ ಚುನಾವಣೆಯಲ್ಲಿ 18 ವರ್ಷ ತುಂಬಿದ ಯುವ ಮತದಾರರು ಅತ್ಯಂತ ಜವಾಬ್ದಾರಿ ಯುತವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಉತ್ತಮ ವ್ಯಕ್ತಿಯನ್ನು ಆಯ್ಕೆಮಾಡಬೇಕು ಎಂದರು.
ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಬಳೆಪೇಟೆ ಮತಗಟ್ಟೆ ಕೇಂದ್ರವನ್ನು ಯುವ ಸೌರವ ಹೆಸರಿನಲ್ಲಿ ವಿಶೇಷ ಮತಗಟ್ಟೆ ಕೇಂದ್ರವಾಗಿ ಸಿದ್ದಪಡಿಸಿದ್ದು, ಮೊದಲ ಬಾರಿಗೆ ಮತದಾನ ಮಾಡು ವಂತಹ ಯುವಕ ಮತ್ತು ಯುವತಿಯರಿಗೆ ವಿಶೇಷ ಮತಗಟ್ಟೆ ಕೇಂದ್ರವಾಗಿರುವುದರಿಂದ ಯುವಕರು ಉತ್ಸುಕತೆಯಿಂದ ತಪ್ಪದೆ ಮತ ಚಲಾಯಿಸಬೇಕು ಎಂದು ಮಹೇಶ್‍ಕುಮಾರ್ ಅವರು ತಿಳಿಸಿದರು.
ಯುವ ಮತದಾರರಾದ ಶಿವು ಮಾತನಾಡಿ ಭಾರತ ಸಂವಿಧಾನ 18 ವರ್ಷ ಮೇಲ್ಪಟ್ಟವರಿಗೆಲ್ಲ ಮತದಾನ ಮಾಡುವಂತಹ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ ಹಾಗೂ ಎಲ್ಲಾ ಯುವಕರು ಸಹ ತಪ್ಪದೆ ಮತದಾನ ಮಾಡಿ ಎಂದರು.
ಪಟ್ಟಣದ ಪ್ರಮುಖ ಬದಿಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡು ಮೆರವಣಿಗೆ ನಡೆಸಿ, ಮತಗಟ್ಟೆ ಕೇಂದ್ರಗಳ ಮುಂಭಾಗ ಮತದಾನ ಪ್ರತಿಜ್ಞೆ ವಿಧಿ ಭೋದಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಚೇರಿಯ ವ್ಯವಸ್ಥಾಪಕ ವೆಂಕಟಾಚಲ ಮೂರ್ತಿ, ಸಚಿನ್, ಹರೀಶ್, ಎಲ್ಲಾ ಮತಗಟ್ಟೆ ಕೇಂದ್ರಗಳ ಬಿ.ಎಲ್.ಒ ಹಾಗೂ ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.