ಬಿಜೆಪಿಯು ಮನಿ ಲಾಂಡ್ರಿಂಗ್ ಮಾಡುತ್ತಿದೆ: ರಂದೀಪ್ ಸುರ್ಜೇವಾಲ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.22- ಬಿಜೆಪಿಯು ಮನಿ ಲಾಂಡ್ರಿಂಗ್ ಮಾಡುತ್ತಿದೆ ಎಂದು ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲ ಆರೋಪ ಮಾಡಿದರು.
ಅವರು ಚಾಮರಾಜನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಯೋಜನೆಗಳನ್ನು ಜನರಿಗೆ ತಲುಪಿಸಿದೆ, 58 ಕೋಟಿ ಹಣ ಕರ್ನಾಟಕದ ಜನತೆಯ ಖಾತೆಗೆ ಹಾಕಿದ್ದೀವಿ, ಕಾಂಗ್ರೆಸ್ ಪಾರ್ಟಿ ರಾಷ್ಟ್ರೀಯ ಮಟ್ಟದಲ್ಲೂ ಗ್ಯಾರಂಟಿ ಕೊಡಲು ನಿರ್ಧರಿಸಿದೆ ಆದರೆ ಬಿಜೆಪಿಯು ಮನಿ ಲಾಂಡ್ರಿಂಗ್ ಮಾಡುತ್ತಿದೆ, 5 ಕೋಟಿ ಹಣ ನಿನ್ನೆ ಬೆಂಗಳೂರಲ್ಲಿ ಸೀಜ್ ಮಾಡಲಾಗಿದ್ದು ಅದನ್ನು ಚಾಮರಾಜನಗರ, ಮೈಸೂರಿಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಿದರು.
ಎರಡು ಪತ್ರಗಳು ಕೂಡ ಕಾರಿನಲ್ಲಿ ಲಭ್ಯವಾಗಿದ್ದು ಬಿಜೆಪಿಗೆ ಸಂಬಂಧಿಸಿದೆ,ಕೋದಂಡ ಎಂಬ ವ್ಯಕ್ತಿಯ ಹೆಸರಿನ ಕೆನರಾ ಬ್ಯಾಂಕ್‍ನಿಂದ 5 ಕೋಟಿ ಹಣವನ್ನುಮಾರ್ಚ್ 27 ರಂದು ಹಣವನ್ನು ವಿಥ್ ಡ್ರಾ ಮಾಡಲಾಗಿದೆ ಆದರೆ ಬ್ಯಾಂಕ್‍ನಿಂದ ಹಣವನ್ನು ಸಾಗಾಟ ಮಾಡಲು 1 ತಿಂಗಳು ಬೇಕಾ? ಎಂದು ಪ್ರಶ್ನಿಸಿದರು.
50 ಸಾವಿರಕ್ಕೂ ಹೆಚ್ಚು ಹಣ ಸಾಗಿಸಿದ್ರೆ ಎಲೆಕ್ಷನ್ ಕಮಿಷನ್ ಸೀಜ್ ಮಾಡುತ್ತೆ, ಬಿಜೆಪಿ ಕೋಟಿ ಕೋಟಿ ಹಣವನ್ನು ಸಾಗಿಸುತ್ತಿದೆ, ನಾನು ಮೋದಿ, ಬಿಎಸ್‍ವೈ, ಬಿವೈ ವಿಜಯೇಂದ್ರ, ಆರ್ ಅಶೋಕ್ ಅವರನ್ನ ಪ್ರಶ್ನೆ ಮಾಡ್ತೀನಿ, ವಿಥ್ ಡ್ರಾ ಮಾಡಿದ ಹಣವನ್ನ 10 ಕಿಮೀ ಸಾಗಿಸಲು ಒಂದು ತಿಂಗಳು ಬೇಕಾಗಿತ್ತಾ? ಎಂದು ಕಿಡಿಕಾರಿದರು. ಎಲೆಕ್ಷನ್ ಕಮಿಷನ್ ಯಾಕೆ ವಿಜಯೇಂದ್ರ ಹಾಗೂ ಆರ್.ಅಶೋಕ್ ಮೇಲೆ ಕ್ರಮ ತೆಗೆದುಕೊಳ್ಳಬಾರದು ಎಂದು ಆರೋಪಿಸಿದರು.
ಐಟಿ ಇಲಾಖೆ ಈ ಸಂಧರ್ಭದಲ್ಲಿ ಬಿಜೆಪಿಯನ್ನ ಉಳಿಸಲು ಎಂಟ್ರಿಯಾಗಿತ್ತು, ರಾತ್ರೋರಾತ್ರಿಯೇ ಇನ್ನೊಂದು ಆದೇಶ ಕೂಡ ಪಾಸ್ ಅಗುತ್ತೆ, ಈ ಹಣವನ್ನ ಬ್ಯಾಂಕ್‍ನಿಂದ ವಿಥ್ ಡ್ರಾ ಮಾಡಲಾಗಿದೆ ಅದನ್ನ ಬಿಜೆಪಿಗೆ ಹಿಂದಿರುಗಿಸಿ, ಇಲ್ಲಿ ಯಾವ ರೀತಿಯ ಮನಿ ಲಾಂಡ್ರಿಂಗ್ ನಡಿತೀದೆ, ಬಿಜೆಪಿ ನಾಯಕರೇ ಉತ್ತರ ಕೊಡಿ ಎಂದರು.
ಮೋದಿ ಸರ್ಕಾರ ಕೇವಲ ಮಾಡಿರೋದು ಚೊಂಬು ಮಾಡೆಲ್, ನಾವು ಕೇಂದ್ರ ಸರ್ಕಾರಕ್ಕೆ 100 ರೂ ಕೊಟ್ರೆ 13 ಕೊಡ್ತಾರೆ,ನಾವು ಅದನ್ನ ಕೇಳಿದ್ರೆ ಚೊಂಬು ತಗೋಳಿ ಅಂತಾರೆ, ಉದ್ಯೋಗ ಕೇಳಿದ್ರೆ ಮೋದಿ ಹೇಳೋದು ಚೊಂಬು ತಗೋಳಿ, ಒಟ್ಟಾರೆ ಮೋದಿ ಸರ್ಕಾರ ಖಾಲಿ ಚೊಂಬು ಕೊಟ್ಟಿದೆ ಎಂದು ಸುರ್ಜೇವಾಲ ಚೊಂಬು ಪ್ರದರ್ಶಿಸಿದರು. ಇನ್ನು, ಸುದ್ದಿಗೋಷ್ಠಿ ನಡೆಸುವ ವೇಳೆಯೂ ವೇದಿಕೆ ಮೇಲೆ ಖಾಲಿ ಚೊಂಬುಗಳನ್ನು ಇಡಲಾಗಿತ್ತು.