ಗುರುಕುಲ ಶಿಕ್ಷಣದಿಂದ ನೈತಿಕ ಮೌಲ್ಯಗಳ ಪುನರುತ್ಥಾನ : ಶ್ರೀ ರಂಭಾಪುರಿ ಜಗದ್ಗುರುಗಳು
ಕಲಬುರಗಿ:ಎ.21:ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಇನ್ನಷ್ಟು ಆದರ್ಶ ಚಿಂತನೆಗಳು ಬೆಳೆಯಬೇಕು. ಆದರೆ ಸಮಾಜದ ಹಲವಾರು ರಂಗಗಳಲ್ಲಿ ಅನಾರೋಗ್ಯಕರ ವಾತಾವರಣ ಹೆಚ್ಚು ಬೆಳೆಯುತ್ತಿದೆ. ಆದ್ದರಿಂದ ಗುರುಕುಲ ಮಾದರಿ ಶಿಕ್ಷಣದಿಂದ ನೈತಿಕ ಮೌಲ್ಯಗಳು ಪುನರುತ್ಥಾನಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ಚಿತ್ತಾಪುರ ತಾಲೂಕಿನ ಸುಪ್ರಸಿದ್ಧ ಸನ್ನತಿ ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಸಂಯೋಜಿಸಿದ ಶ್ರೀ ಗುರು ಸೋಮೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಗುರುಕುಲ ಸಂಘದಿಂದ ಜರುಗಿದ ವೈದಿಕ ಮತ್ತು ಜ್ಯೋತಿಷ್ಯ 2ನೇ ವರುಷದ ಕಾರ್ಯಾಗಾರ ಶಿಬಿರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಉತ್ಕøಷ್ಟ ಸಂಸ್ಕøತಿಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಪ್ರಾಚೀನ ಕಾಲದಲ್ಲಿ ಆಚಾರ್ಯರು ಮತ್ತು ಋಷಿಮುನಿಗಳು ಗುರುಕುಲ ಸ್ಥಾಪಿಸಿ ತನ್ಮೂಲಕ ಆಧ್ಯಾತ್ಮ ಜ್ಞಾನದ ಅರಿವನ್ನು ಬೆಳೆಸಿಕೊಂಡು ಬರುತ್ತಿದ್ದರು. ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಗುರುಕುಲ ಮಾದರಿ ಶಿಕ್ಷಣ ಜನರ ಜೀವನ ಮಟ್ಟವನ್ನು ಹೆಚ್ಚಿಸುತ್ತಿತ್ತು. ಆದರೆ ಇಂದು ಅತ್ಯಾಧುನಿಕ ಶಿಕ್ಷಣ ಬೆಳೆದರೂ ಬದುಕಿಗೆ ನೆಮ್ಮದಿ ತೃಪ್ತಿ ಸಾಮರಸ್ಯ ಉಂಟು ಮಾಡುವ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಯುವ ಸಮುದಾಯ ದಾರಿ ತಪ್ಪುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಸಂಸ್ಕಾರ ಸಂಸ್ಕøತಿಗಳ ಅರಿವು ಆಚರಣೆ ಇಲ್ಲದಿರುವುದೇ ಕಾರಣವೆಂದರೆ ತಪ್ಪಾಗದು. ಸನ್ನತಿ ಶ್ರೀ ಗುರು ಸೋಮೇಶ್ವರ ಗುರುಕುಲ ಸಂಘದಿಂದ ವೈದಿಕ ಜ್ಯೋತಿಷ್ಯದ 2ನೇ ವರುಷದ ಕಾರ್ಯಾಗಾರ ಶಿಬಿರವನ್ನು 45 ದಿನಗಳವರೆಗೆ ನಡೆಸುತ್ತಿರುವುದು ಸ್ತುತ್ಯವಾದ ಕಾರ್ಯವೆಂದು ಶ್ಲಾಘಿಸಿದ ಜಗದ್ಗುರುಗಳು ಪ್ರಾಚೀನ ಸನ್ನತಿ ಸೋಮೇಶ್ವರ ದೇವಸ್ಥಾನ ಮತ್ತು ಪರಿಸರ ಹೆಚ್ಚು ಅಭಿವೃದ್ಧಿಯಾಗಬೇಕಾದ ಅವಶ್ಯಕತೆಯಿದೆ. ಈ ಭಾಗದ ರಾಜಕೀಯ ಧುರೀಣರು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಜಗದೀಶ್ವರ ಶಾಸ್ತ್ರಿಗಳು ಶಿಬಿರದ ಮುಂದಾಳತ್ವ ವಹಿಸಿಕೊಂಡು ವೀರಮಹೇಶ್ವರ ಜಂಗಮ ವಟುಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಹರುಷ ತಂದಿದೆ ಎಂದರು.
ದಿಗ್ಗಾವಿ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳು ಮತ್ತು ಮಳಖೇಡ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಗುರು ಪರಂಪರೆಯ ಮಹತ್ವವನ್ನು ಭಕ್ತರಿಗೆ ತಿಳಿಸಿದರು. ಸನ್ನತಿ ರೇವಣಸಿದ್ಧಯ್ಯ ಶಾಸ್ತ್ರಿಗಳು ನಿರೂಪಿಸಿದರು. ಸನ್ನತಿ ಕ್ಷೇತ್ರಕ್ಕೆ ಆಗಮಿಸಿದ ಜಗದ್ಗುರುಗಳವರನ್ನು ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರು. ಪ್ರಾಚೀನ ಶ್ರೀ ಸೋಮೇಶ್ವರ ಸ್ವಾಮಿಗೆ ಶ್ರೀ ಜಗದ್ಗುರುಗಳು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಶಿಬಿರಾರ್ಥಿಗಳು ಮತ್ತು ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಗದ್ಗುರುಗಳವರ ಆಶೀರ್ವಾದ ಪಡೆದರು.
ಸನ್ನತಿ ಸಮಾರಂಭಕ್ಕೂ ಮುನ್ನ ದಿಗ್ಗಾವಿ ಗ್ರಾಮಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿ ಶ್ರೀ ಶಂಭುಲಿಂಗೇಶ್ವರ ತೇರಿನ ಪಾದಗಟ್ಟಿ ಪ್ರತಿಷ್ಠಾಪನೆ ನೆರವೇರಿಸಿ ಸೇರಿದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.