ಕಬಡ್ಡಿ ಆಟದಿಂದ ಶ್ವಾಸದ ಮೇಲೆ ಹಿಡಿತ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.21: ಕಬಡ್ಡಿ ಆಟ ಆಡುವುದರಿಂದ ಶ್ವಾಸದ ಮೇಲೆ ಹಿಡಿತ ಸಾಧಿಸಬಹುದು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರಗಾಲ ಪ್ರಯುಕ್ತ ಬೇಸಿಗೆ ಬಿಸಿಯೂಟ ಕಾರ್ಯಕ್ರಮದಲ್ಲಿ ಹಾಜರಾದ ಮಕ್ಕಳಿಗೆ ಕಬಡ್ಡಿ ಸ್ಪರ್ಧೆ ಏರ್ಪಡಿಸಿ ಮಾತನಾಡಿದ ಅವರು ಕಬಡ್ಡಿ ನಮ್ಮ ದೇಶೀಯ ಆಟ.ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಹಬ್ಬಹರಿದಿನ,ಜಾತ್ರೆ, ಉತ್ಸವಗಳಲ್ಲಿ ಆಡುತ್ತಾರೆ.
ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಇಷ್ಟ ಪಡುವ ಆಟವಾಗಿದೆ.ಇಂದು ನಮ್ಮ ಶಾಲೆಯ ಹುಡುಗಿಯರು ಆಡುತ್ತಿರುವುದನ್ನು ನೋಡಿದರೆ ಬಾಲಕರಿಗಿಂತ ಕಡಿಮೆ ಇಲ್ಲ ಎಂದು ಅನಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕಬಡ್ಡಿ ಮಾತ್ರವಲ್ಲದೆ ಇತರೇ ಆಟಗಳನ್ನು ಆಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತೀರಿ ಜೊತೆಗೆ ಏಕಾಗ್ರತೆ ಬೆಳೆಸಿಕೊಳ್ಳಲು ಸಹಕಾರಿ ಎಂದು ಹೇಳಿದರು.
ಹಲಕುಂದಿ ಕ್ಲಸ್ಟರ್ನ ಸಿ.ಆರ್. ಪಿ.ಶ್ರೀನಿವಾಸ ರೆಡ್ಡಿ ಉದ್ಘಾಟಿಸಿ ಮಾತನಾಡಿ ಬೇಸಿಗೆಯ ಬಿಸಿಲು ಲೆಕ್ಕಿಸದೆ ಕಬಡ್ಡಿಯಲ್ಲಿ ಪಾಲ್ಗೊಂಡಿರುವುದನ್ನು ನೋಡಿ ಸಂತಸವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬಂದು ಬಿಸಿಯೂಟದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.