ಗಣಿನಾಡಿನಲ್ಲಿಮತದಾನ ಜಾಗೃತಿಗಾಗಿ ಮ್ಯಾರಥಾನ್ ಓಟ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,. ಏ.21: ನಗರ ಪ್ರದೇಶದಲ್ಲಿ ಕಡಿಮೆಯಾಗುತ್ತಿರುವ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ
ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಇಂದು ಗಣಿನಾಡು ಬಳ್ಳಾರಿ ನಗರದಲ್ಲಿ ಮ್ಯಾರಥಾನ್ ಓಟ ನಡೆಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಇದನ್ನು ಆಯೋಜಿಸಿತ್ತು.
ಬಳ್ಳಾರಿಯ ಐತಿಹಾಸಿಕ ರೈಲ್ವೇ ನಿಲ್ದಾಣದಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟಕ್ಕೆ  ಜಿಲ್ಲೆಯ ಚುನಾವಣಾ ರಾಯಭಾರಿ ಕ್ರೀಡಾಪಟು ನಂದಿನಿ ಅಗಸರ ಚಾಲನೆ ನೀಡಿದರು.
ಇಲ್ಲಿಂದ  ಆರಂಭಗೊಂಡ ಮ್ಯಾರಥಾನ್ ಓಟದಲ್ಲಿ   ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಯುವಜನತೆ, ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ ನೂರಾರು ಜನತೆ  ಪಾಲ್ಗೊಂಡಿದ್ದರು.
ಗವಿಯಪ್ಪ  ಸರ್ಕಲ್ ಮೂಲಕ ಸಾಗಿದ ಓಟದಲ್ಲಿ  ಮತದಾನದ ಮಹತ್ವದ ಘೋಷಣೆಗಳನ್ನು ಕೂಗುತ್ತ ಮತ್ತು ಮತದಾನದ ಹಕ್ಕಿನ ಬಗ್ಗೆ ತಿಳಿಸುತ್ತ ವಾಲ್ಮೀಕಿ ಭವನ, ಮೊದಲ ರೈಲ್ವೆ ಗೇಟ್, ಕೌಲ್ ಬಜಾರ್
 ಮೂಲಕ‌ 5 ಕಿಲೋ ಮೀಟರ್ ಸಾಗಿದ ಓಟ ಐಟಿಐ ಕಾಲೇಜಿಗೆ ಬಂದು ವಿರಮಿಸಿತು.
ಜಾಥಾ ಆರಂಭಕ್ಕೂ ಮುನ್ನ ಮತದಾನದ ಪ್ರತಿಜ್ಞಾ ವಿಧಿ ಭೋದಿಸಲಾಯ್ತು.
ಸ್ವತಃ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ  ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ,
ಮತದಾನಕ್ಕಾಗಿ ಸಾಕಷ್ಟು ಜಾಗೃತ ಕಾರ್ಯಕ್ರಮಗಳನ್ನು ಮಾಡಿದೆ. ಅದರಲ್ಲಿ ಯುವ ಮತದಾರರನ್ನು ಟಾರ್ಗೆಟ್ ಮಾಡಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 18 ಹಾಗು 19 ವರ್ಷದ 60 ಸಾವಿರ ಮತದಾರರಿದ್ದಾರೆ. ಅವರೆಲ್ಲ ಮೇ 7 ರಂದು ಮತಗಟ್ಟೆಗೆ ಬಂದು ಮತ ಹಾಕಬೇಕು.
ದೇಶದ ಚುನಾವಣಾ ಪರ್ವದಲ್ಲಿ ಎಲ್ಲರೂ ಭಾಗವಹಿಸಿ
ಎಂದು ತಿಳಿಸಿದರು.
ಹೈದ್ರಾಬಾದಿನಲ್ಲಿರುವ ಬಳ್ಳಾರಿ ಜಿಲ್ಲೆಯ ಚುನಾವಣಾ ಐಕಾನ್  ಅಥ್ಲೆಟಿಕ್ ನಂದಿನಿ ಅಗಸರ
ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿ. ಚುನಾವಣೆಯ ಐಕಾನ್ ಆಗಿದ್ದಕ್ಕೆ ಸಂತಸ ಇದೆ. ಎಲ್ಲರೂ ಉತ್ತಮ ಭಾರತಕ್ಕಾಗಿ ಮತ ಚಲಾಯಿಸಿ. ನಾನು ಮತ ಹಾಕದಿದ್ದರೆ ಏನಾಗುತ್ತೆ ಎನ್ನಬೇಡಿ. ಅದು ನಿಮಗಾಗಿ ಅಲ್ಲ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಒಂದು ದಿನ ಮತದಾನಕ್ಕಾಗಿ ಮೀಸಲಿಡಿ ಎಂದರು.
 ಮತ್ತೊಬ್ಬ ಚುನಾವಣಾ ಐಕಾನ್ ನೃತ್ಯ ಶಿಕ್ಷಕ ಎಸ್. ಎಸ್.ಕೆ.ಆರ್. ಜಿಲಾನ್ ಭಾಷ,   ನಮ್ಮ ದೇಶದಲ್ಲಿ ಅನೇಕ ಹಬ್ಬಗಳು ಪ್ರತಿವರ್ಷ ಬರುತ್ತವೆ. ಆದರೆ ಐದು ವರ್ಷಗಳಿಗೆ ಒಮ್ಮೆ ಬರುವ ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಿ.  ಮೇ 7 ರಂದು ಮತದಾನಕ್ಕಾಗಿ ರಜೆ ಘೋಷಣೆ ಮಾಡಿದೆ. ಹಾಗಂತ ಮನೆಯಲ್ಲಿರಬೇಡಿ, ಮತಗಟ್ಟೆಗೆ ಬನ್ನಿ, ಬಿಸಿಲಿದೆಂದು ಹಿಂಜರಿಯಬೇಡಿ ಮತಗಟ್ಟೆಯಲ್ಲಿ ನೆರಳು ನೀರಿನ ವ್ಯವಸ್ಥೆ ಮಾಡಿದೆ. ಯುವಕರು ಸೇರಿದಂತೆ ಎಲ್ಲರೂ  ತಪ್ಪದೇ ಬಂದು ಮತದಾನ ಮಾಡಿ ಎಂದರು..
ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಸಂಜೆವಾಣಿಯೊಂದಿಗೆ ಮಾತನಾಡಿದ ಮತದಾರರಾದ, ಹಾಸ್ಯ ಕಲಾವಿದ  ಎ.ಎರ್ರಿಸ್ವಾಮಿ  ಸಂವಿಧಾನದ ಆಶಯ ಜನರ ಹಿತವನ್ನು ಕಾಪಾಡುವಂತಹುದು, ಅದಕ್ಕಾಗಿ ಉತ್ತಮ ಸರ್ಕಾರ ರಚನೆಗೆ ಜನಮತ ಮುಖ್ಯ. ಸುಭದ್ರ, ಸುಸ್ಥಿರ, ದೇಶದ ಸುರಕ್ಷಿತವನ್ನು ಕಾಪಾಡುವ ಸರ್ಕಾರ ರಚನೆಗೆ ಎಲ್ಲರೂ ಮತದಾನ ಮಾಡಬೇಕು ನಾನು ಮತಚಲಾಯಿಸುವೆ ನೀವು ಮತ ಚಲಾಯಿಸಿ ಎಂದರು.
ಕಪ್ಪಗಲ್ಲು ಆಚಾರ್ ಅತ್ಯುತಮ ಸರ್ಕಾರಕ್ಕಾಗಿ ಪ್ರತಿಯೊಬ್ಬರು ಮತದಾನ ಮಾಡೋಣ ಎಂದರೆ.
ಗಾಂಧಿನಗರ ಠಾಣೆಯ  ಪೊಲೀಸ್ ಇನ್ಸಫೆಕ್ಟರ್
 ಸಿದ್ರಾಮಪ್ಪ ಗಡಾದ,  ಭಾರತ ದೇಶದ ಪ್ರಜಾಪ್ರಭುತ್ವದ ಹಬ್ಬ ಎಂದರೆ ಸಾರ್ವತ್ರಿಕ ಚುನಾವಣೆಯಾಗಿದೆ. ನಮ್ಮ ದೇಶ ನೀಡಿರುವ ಮಹತ್ವದ ಹಕ್ಕು ಮತದಾನವಾಗಿದೆ. ಅದನ್ನು ನಾವು
ಖಡ್ಡಾಯವಾಗಿ ಮತದಾನ ಮಾಡಿ ಶೇ 100 ರಷ್ಟು ಸಾಧನೆ ಮಾಡೋಣ,ಸದೃಡ ದೇಶದ ನಿರ್ಮಾಣ ಮಾಡೋಣ ಎಂದರು
ಮ್ಯಾರಥಾನ್ ನಲ್ಲಿ  ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರು. ಎಸ್ಪಿ ರಂಜಿತ್ ಕುಮಾರ್ ಬಂಡಾರು
ಎಸಿ   ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ, ಪಾಲಿಕೆ ಆಯುಕ್ತ ಖಲೀಲ್ ಸಾಬ್ ಪಾಲ್ಗೊಂಡಿದ್ದರು.