ನೇಹಾ ಕೊಲೆ ಕೇಸ್:ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸಿ
ವಿಜಯಪುರ,ಏ.21:ಕುಮಾರಿ ನೇಹಾ ನಿರಂಜನ ಹಿರೇಮಠ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಜಂಗಮ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಂಗಮ ಸಮಾಜ ಮುಖಂಡ ಸಂಜೀವ ಹಿರೇಮಠ ಹಾಗೂ ಪ್ರಧಾನ ಕಾರ್ಯದರ್ಶಿÀ ಎಸ್.ಕೆ. ಸಾವಳಗಿಮಠ ಮಾತನಾಡಿ, ಹುಬ್ಬಳ್ಳಿ ನಗರದ ಬಿ.ವಿ.ಬಿ. ಕಾಲೇಜಿನ ಎಂ.ಸಿ.ಎ. ವಿದ್ಯಾರ್ಥಿನಿ ಕುಮಾರಿ ನೇಹಾ ನಿರಂಜನ ಹಿರೇಮಠ ಅವರನ್ನು ಹಾಡ ಹಗಲೇ ಕಾಲೇಜಿನ ಆವರಣದಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು ಪ್ರಮುಖ ಆರೋಪಿ ಫಯಾಜನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇವನ ಜೊತೆ ಇತರೆ ನಾಲ್ಕು ಜನ ಸಹಪಾಠಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಆ ಇತರೆ ನಾಲ್ಕು ಜನ ಆರೋಪಿಗಳನ್ನು ಸಹ ಕೂಡಲೇ ಬಂಧಿಸಬೇಕು. ಎಲ್ಲ ಆರೋಪಿಗಳಿಗೆ ಜಾಮೀನು ಸಿಗದಂತೆ ಪೊಲೀಸರು ನ್ಯಾಯ ಸಮ್ಮತ ವರದಿ ನೀಡಬೇಕು ಎಂದರು.
ಕುಮಾರಿ ನೇಹಾ ಹಿರೇಮಠ ಅವರ ಮೇಲೆ ಆದಂತಹ ಕೃತ್ಯಗಳು ಇನ್ನೆಂದು ಮುಂದೆ ಮರುಕಳಿಸದಂತೆ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಸಾದ ವಸ್ತ್ರದ, ಹಿಂದೂ ಮಹಾಸಭಾದಿಂದ ಪೂರ್ಣಿಮಾ ಬದ್ನೂರ, ಭುವನೇಶ್ವರಿ ಕೋರವಾರ, ಮಾಯಾ ಚೌಧರಿ ಇತರರು ಮಾತನಾಡಿದರು,
ಇದೇ ಸಂದರ್ಭದಲ್ಲಿ ಬಸಯ್ಯ ಚಿನ್ನಕಾಳಿಮಠ, ಡಾ. ಬಸವರಾಜ ನಂದಿಕೋಲಮಠ, ವಿಶ್ವನಾಥ ಹಿರೇಮಠ ಕಾಖಂಡಕಿ, ರಾಚಯ್ಯ ಮಠಪತಿ, ಗುರಸಿದ್ದಯ್ಯ ಹಿರೇಮಠ, ಗುರಯ್ಯ ಯಾದವಾಡಮಠ, ಜೆಡಿಎಸ್ ಮುಖಂಡರಾದ ರಾಜು ಹಿಪ್ಪರಗಿ, ವಿಶ್ವನಾಥ ಹಿರೇಮಠ, ಮಲ್ಲಯ್ಯ ಹಿರೇಮಠ, ಪುಷ್ಪಾ ಗಚ್ಚಿನಮಠ, ಸುರೇಖಾ ಹಿರೇಮಠ, ಶೈಲಜಾ ನಂದಿಕೋಲಮಠ, ಸುನೀತಾ ಹಿರೇಮಠ, ವೀಣಾ ಹಿರೇಮಠ, ಚೈತ್ರಾ ಮಹಾಂತಮಠ, ಪೂಜಾ ಹಿರೇಮಠ, ಮೀನಾಕ್ಷಿ ಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.