ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಾಳೆ
ಬೀದರ್:ಏ.21: ಗುರುವಾರ ಹುಬ್ಬಳ್ಳಿ-ಧಾರವಾಡ ಕಾರ್ಪೋರೆಟರ್ ಮಗಳು ನೇಹಾಳನ್ನು ಹಾಡ ಹಗಲೆ ಬರ್ಬರವಾಗಿ ಕೊಲೆಗೈದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕ ಹಾಗೂ ಜಿಲ್ಲೆಯ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಾಳೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಜೆಪಿ ಪಕ್ಷ, ಕಳೆದ 10 ತಿಂಗಳಿಂದ ರಾಜ್ಯದಲ್ಲಿ ಕೊಲೆ, ಸುಲಿಗೆ, ವಂಚನೆ, ರಾಜಕೀಯ ತುಷ್ಟಿಕರಣ ಜೋರಾಗಿ ನಡೆಯುತ್ತಿದ್ದು, ಇದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನೇಹಾ ಹಿರೇಮಠ ಅವರ ತಂದೆ ಓರ್ವ ಕಾಂಗ್ರೆಸ್‍ನ ಕಾರ್ಪೋರೆಟರ್ ಆಗಿದ್ದು, ತನ್ನ ಸ್ವಂತದ ಪಕ್ಷದವರಿಗೆ ರಕ್ಷಣೆ ಕೊಡಿಸಲು ಸಿದ್ಧರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವಾಗ ಇತರರಿಗೆ ಹೇಗೆ ರಕ್ಷಣೆ ಕೊಡಲು ಸಾಧ್ಯ? ಎಂದು ಕೇಸರಿ ಕಲಿಗಳು ದೂರಿದ್ದಾರೆ.
ನೇಹಾ ಹಿರೇಮಠ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಗ್ರಹ ಮಂತ್ರಿ ಡಾ.ಜಿ ಪರಮೇಶ್ವರ ಅವರು ದ್ವಂದ್ವ ಹೇಳಿಕೆ ನೀಡುವ ಮೂಲಕ ತುಷ್ಟಿಕರಣ ರಾಜಕೀಯಕ್ಕೆ ಪುಷ್ಟಿ ಕೊಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಒಂದು ಭಯದ ವಾತಾವರಣ ಸೃಷ್ಟಿಯಾಗಿ ಇಡೀ ದೇಶ ತಲೆ ತಗ್ಗಿಸುವಂಥ ಘಟನೆ ಜರುಗಿದೆ. ಇತ್ತಿಚೀಗೆ ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹೊಡೆಯುವುದು, ಗದಗನಲ್ಲಿ ನಾಲ್ವರ ಕೊಲೆ, ದೇಶಭಕ್ತರಿಗೆ ಕಿರುಕುಳ ನೀಡುವುದು, ಹಿಂದು ಯುವಕರ ಮೇಲೆ ಕೇಸ್ ಹಾಕುವುದು ಹೀಗೆ ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿ ಖಂಡಿಸಿ, ನೇಹಾ ಕೊಲೆ ಕೆಸ್ ಸಿ.ಬಿ.ಐಗೆ ವಹಿಸಬೇಕೆಂದು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಲಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ತಿಳಿಸಿದ್ದಾರೆ.
ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಪ್ರವಾಸಿ ನಂದಿರದಿಂದ ಪ್ರತಿಭಟನೆ ಆರಂಭವಾಗಿ ಅಂಬೇಡ್ಕರ್ ವೃತ್ತ, ಮಹಾವೀರ ಚೌಕ್, ಭಗತಸಿಂಗ್ ವೃತ್ತ, ಬಸವೇಶ್ವರ ಸರ್ಕಲ್, ಶಿವಾಜಿ ಚೌಕ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಗುವುದು. ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜೊಇ ಎಮ್.ಎಲ್.ಸಿಗಳು, ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಹಿರಿಯರು, ಎಲ್ಲ ಮಂಡಲಗಳ ಅಧ್ಯಕ್ಷರು ಭಾಗವಹಿಸುವರು.
ಆದ್ದರಿಂದ ಈ ಮಹತ್ವದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.