ಒಕ್ಕಲಿಗರು ಯಧುವೀರ್ ಬೆಂಬಲಿಸುವಂತೆ ಕರೆ
ಸಂಜೆವಾಣಿ ನ್ಯೂಸ್
ಮೈಸೂರು:ಏ.21:- ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಕೊಡುಗೆ ಶೂನ್ಯ. ರಾಜ ಮನೆತನದವರ ಸಹಕಾರವೇ ಹೆಚ್ಚಿದ್ದು, ಒಕ್ಕಲಿಗ ಸಮಾಜ ಯದುವೀರ್ ಅವರನ್ನು ಬೆಂಬಲಿಸಬೇಕು ಎಂದು ಒಕ್ಕಲಿಗರ ಸಂಘಟನೆ ಒಕ್ಕೂಟ ಮನವಿ ಮಾಡಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರತಿನಿಧಿ ಸತೀಶ್ ಗೌಡ ಬೀಡನಹಳ್ಳಿ ಮಾತನಾಡಿ, ಜಿಲ್ಲಾ ಒಕ್ಕಲಿಗರ ಸಂಘದ ಹೆಸರನ್ನು ಬಳಸಿ ಕಾಂಗ್ರೆಸ್ ಪರ ಬೆಂಬಲ ಸೂಚಿಸಲಾಗಿದೆ. ಸಂಘದ ಚುನಾಯಿತ ಸಮಿತಿಯ ಅಧಿಕಾರಾವಧಿ ಮುಗಿದಿದ್ದು, ಅವರ ಹೇಳಿಕೆಗೆ ಯಾವುದೇ ಬೆಲೆಯಿಲ್ಲ. ಜಾತಿಯ ಅಧಿಕೃತ ಸಂಘ ಒಂದು ಪಕ್ಷದ ಪರ ಪ್ರಚಾರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 47 ವರ್ಷಗಳಲ್ಲಿ ಮೈಸೂರಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡದಿರಲು, ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರ ಸೋಲಿಗೆ ಯಾರು ಕಾರಣ. ಈ ಬಗ್ಗೆ ಲಕ್ಷ್ಮಣ್ ಅವರು ಪ್ರಶ್ನಿಸಲಿಲ್ಲವೇಕೆ. ಕೆ.ಎಚ್.ರಾಮಯ್ಯನವರ ಸಹಾಯಕ್ಕೆ ನಿಂತ ರಾಜಮನೆತನ ಒಕ್ಕಲಿಗ ಸಂಘ ಹಾಗೂ ಸಮುದಾಯಕ್ಕೆ ಸಾಕಷ್ಟು ಸಹಕಾರ ನೀಡಿದೆ. ಈ ಎಲ್ಲವನ್ನು ಸಮುದಾಯದ ಜನರು ಪರಿಶೀಲಿಸಿ ಮತ ಚಲಾಯಿಸಬೇಕು ಎಂದರು.
ಒಕ್ಕೂಟದ ಪ್ರಮುಖರಾದ ಕೃಷ್ಣ, ಹೇಮಾ, ಸುರೇಶ್ ಗೌಡ, ಗಣೇಶ್, ಸುರೇಂದ್ರ, ಅಣ್ಣೇಗೌಡ, ಕೃಷ್ಣೇಗೌಡ, ಬೆಟ್ಟೇಗೌಡ, ರಾಜಕುಮಾರ್, ಶೇಖರ್ ಇದ್ದರು.