ಮಕ್ಕಳಿಗೆ ಉತ್ತಮ ಬದುಕು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ
ಮಧುಗಿರಿ, ಸೆ. ೨೧- ಶಿಕ್ಷಕರು ಮಕ್ಕಳಿಗೆ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಉಪಪ್ರಾಂಶುಪಾಲರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮುಖ್ಯ ಶಿಕ್ಷಕರ ಕಾರ್ಯಾಗಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿ- ಪೋಷಕರು ಮಕ್ಕಳಿಗೆ ಜೀವ ನೀಡುತ್ತಾರೆ. ಶಿಕ್ಷಕರು ಆ ಮಕ್ಕಳಿಗೆ ಜೀವನ ರೂಪಿಸುತ್ತಾರೆ. ಇಂತಹ ಪುಣ್ಯದ ಕೆಲಸ ಮಾಡಲು ಆ ದೇವರು ನಿಮಗೆ ಒಂದು ಉತ್ತಮವಾದ ಅವಕಾಶ ನೀಡಿದ್ದಾನೆ. ಈ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.
ನಿಮ್ಮಿಂದ ಜೀವನವನ್ನು ಪಡೆದವರು ಸಮಾಜಕ್ಕೆ ಆಸ್ತಿಯಾಗಬೇಕು. ವಿದ್ಯೆಯಿಂದ ವಂಚಿತರಾದವರು ಸಮಾಜಕ್ಕೆ ಹೊರೆಯಾಗುತ್ತಾರೆ. ಆದ್ದರಿಂದ ತಾವುಗಳು ಸಮಾಜಕ್ಕೆ ಉತ್ತಮವಾದ ಆಸ್ತಿಗಳನ್ನಾಗಿ ನೀಡುವಂತಹ ಪುಣ್ಯದ ಕಾರ್ಯಗಳಲ್ಲಿ ತಾವುಗಳು ಕರ್ತವ್ಯ ನಿರ್ವಹಿಸಬೇಕು. ಸುಶಿಕ್ಷಿತ ಸಮಾಜದ ನಿರ್ಮಾಣ ಮಾಡುವಂತೆ ಕರೆ ನೀಡಿದರು.
ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ, ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕಿ ಗಿರಿಜಾ, ಬಿಇಓ ಕೆ.ಎನ್. ಹನುಮಂತರಾಯಪ್ಪ, ನಟರಾಜು, ಕೃಷ್ಣಪ್ಪ, ಇಂದ್ರಾಣಮ್ಮ, ಶಿಕ್ಷಣಾಧಿಕಾರಿ ಎಂ.ವಿ.ರಾಜಣ್ಣ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಕೆ.ಟಿ. ಸಿದ್ದೇಶ್ವರ್, ಕಸಾಪ ಅಧ್ಯಕ್ಷೆ ಸಹನ ನಾಗೇಶ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಿಗರಾಮಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಂಗಾಧಾಮಯ್ಯ, ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.