ಬಡ ಕೂಲಿ ಕಾರ್ಮಿಕನ ಮನೆ ಖಾತೆ ವಜಾ: ಗ್ರಾ.ಪಂ. ವಿರುದ್ಧ ಆಕ್ರೋಶ
ಕೊರಟಗೆರೆ, ಸೆ. ೨೧- ಇಂದಿರಾ ಆವಾಜ್ ಯೋಜನೆಯಡಿ ಮಂಜೂರಾದ ಮನೆಯ ಖಾತೆಯನ್ನು ಇತ್ತೀಚೆಗೆ ಏಕಾಏಕಿ ವಜಾಗೊಳಿಸಿ ಬಡ ಕೂಲಿ ಕಾರ್ಮಿಕ ವ್ಯಕ್ತಿಗೆ ಗ್ರಾಮ ಪಂಚಾಯ್ತಿಯಿಂದ ಅನ್ಯಾಯವಾಗಿದೆ ಎಂದು ಮನೆಯ ಮಾಲೀಕ ಗ್ರಾಮ ಪಂಚಾಯ್ತಿ ವಿರುದ್ಧ ಅಸಹಾಯಕತೆ ತೋಡಿಕೊಂಡ ಘಟನೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವತ್ತೂರು ಗ್ರಾಮದ ರಾಜರೆಡ್ಡಿ ಎಂಬ ವ್ಯಕ್ತಿ ಮಾವತ್ತೂರು ಗ್ರಾಮ ಪಂಚಾಯ್ತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ೨೦೧೨ ರಲ್ಲಿ ನನ್ನ ಮಡದಿ ಮಂಗಳ ಗೌರಮ್ಮ ಹೆಸರಿಗೆ ಖಾತೆ ಮಾಡಿ ವಸತಿ ರಹಿತ ಫಲಾನುಭವಿ ಹೆಸರಿನಲ್ಲಿ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣವಾದ ನಮಗೆ ೨೦೨೪ರಲ್ಲಿ ಖಾತೆ ಹಾಗೂ ಈ ಸ್ವತ್ತನ್ನು ವಜಾಗೊಳಿಸುವ ಮೂಲಕ ನನಗೆ ಗ್ರಾಮ ಪಂಚಾಯಿತಿ ಅನ್ಯಾಯ ಮಾಡಿದೆ ಎಂದು ಫಲಾನುಭವಿ ಗ್ರಾಮ ಪಂಚಾಯತಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳ ಗೌರಮ್ಮ ರಾಜ ರೆಡ್ಡಿ ಎಂಬುವರು ೨೦೧೦ ರಲ್ಲಿ ಒಂದು ನಿವೇಶನವನ್ನು ಆಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹಣ ನೀಡಿ ಕರಾರು ಪತ್ರ ಮಾಡಿಕೊಂಡ ನನಗೆ ಅಂದಿನ ಪರಿಸ್ಥಿತಿಯಲ್ಲಿ ಸಬ್ ರಿಜಿಸ್ಟ್ರಾರ್‌ರಲ್ಲಿ ನೊಂದಣಿ ಮಾಡಿಸಿಕೊಳ್ಳಲು ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಅಂದು ಕರಾರು ಪತ್ರದ ಮೇಲೆಯೇ ಈ ಸ್ವತ್ತು ಮಾಡಿದ ಗ್ರಾಮ ಪಂಚಾಯ್ತಿ ನಂತರ ಅದೇ ಸ್ವತ್ತಿಗೆ ಮನೆ ಸಹ ಮಂಜೂರು ಮಾಡಿ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ ನನಗೆ ಮನೆ ಮಂಜೂರು ಮಾಡಿ ಮನೆ ನಿರ್ಮಾಣವಾದ ನಂತರ ಈಗ ೨೦೨೪ರಲ್ಲಿ ಸತತ ೧೦-೧೨ ವರ್ಷಗಳಿಂದ ವಾಸವಿರುವ ಮನೆ ಈ ಸ್ವತ್ತು ಹಾಗೂ ಖಾತೆಯನ್ನು ವಜಾಗೊಳಿಸಿರುವುದು ಯಾವ ನ್ಯಾಯ ಗ್ರಾಮ ಪಂಚಾಯಿತಿ ನನಗೆ ಅನ್ಯಾಯ ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಜಶೇಖರ್ ರೆಡ್ಡಿ ೨೦೧೦ರಲ್ಲಿ ನಿವೇಶನ ರಹಿತರಾದ ಸಂದರ್ಭದಲ್ಲಿ ಮಾವತ್ತೂರಿನ ಪ್ರಭಾವಿ ವ್ಯಕ್ತಿ ಒಬ್ಬರಿಂದ ನಿವೇಶನ ಒಂದಕ್ಕೆ ಪೂರ್ಣ ಹಣ ನೀಡಿ ಕರಾರು ಪತ್ರ ಮಾಡಿಸಿಕೊಂಡು ಅದೇ ಕರಾರು ಪತ್ರದ ಆಧಾರದ ಮೇಲೆ ೨೦೧೨ ರಲ್ಲಿ ನಿವೇಶನ ರಹಿತ ಫಲಾನುಭವಿ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಇಂದಿರಾ ಆವಾಜ್ ಯೋಜನೆ ಅಡಿ ೭೫,೦೦೦ ಸರ್ಕಾರದ ವತಿಯಿಂದ ಸಹಾಯಧನ ಬಿಡುಗಡೆಗೊಳಿಸಿ ನಿರ್ಮಾಣಗೊಳಿಸಿದ ಮನೆಗೆ ೨೦೨೪ ಈ ಸಾಲಿನಲ್ಲಿ ಮನೆಯ ಈ ಸ್ವತ್ತು ಹಾಗೂ ಖಾತೆಯನ್ನೇ ವಜಾ ಮಾಡಿರುವುದು ಬಡಪಾಯಿ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದ್ದು, ದಿಕ್ಕು ಕಾಣದಂತಾಗಿದೆ, ನನಗೆ ಗ್ರಾಮ ಪಂಚಾಯಿತಿಯಿಂದ ತುಂಬಾ ಅನ್ಯಾಯವಾಗಿದೆ ಎಂದು ಇಂದಿರಾಆವಾಜ್ ಯೋಜನೆ ಅಡಿ ಮನೆ ನಿರ್ಮಾಣ ಮಾಡಿಕೊಂಡು ಮನೆಯಲ್ಲಿ ವಾಸವಿರುವ ಫಲಾನುಭವಿ ಆದ ಮಂಗಳ ಗೌರಮ್ಮ ದೂರಿದ್ದಾರೆ.
ನಾವು ತುಂಬಾ ಸಂಕಷ್ಟದಲ್ಲಿದ್ದೇವೆ, ಬಡವರ ಗಾಯದ ಮೇಲೆ ಗ್ರಾಮ ಪಂಚಾಯಿತಿ ಬರೇ ಎಳೆಯುತ್ತಿರುವುದು ಸಮಂಜಸವಲ್ಲ. ಸರ್ಕಾರದ ಸಹಾಯಧನದಲ್ಲಿ ನಿರ್ಮಾಣವಾದ ಮನೆಯ ಹಕ್ಕು ವಜಾ ಮಾಡಲು ಗ್ರಾಮ ಪಂಚಾಯ್ತಿಗೆ ಅಧಿಕಾರ ಕೊಟ್ಟವರು ಯಾರು? ನಮ್ಮ ಶ್ರೀಮತಿಯವರ ಹೆಸರಿನಲ್ಲಿ ಮನೆ ಮಂಜೂರಾದ ಮನೆಯ ದಾಖಲಾತಿಯನ್ನು ಗ್ರಾಮ ಪಂಚಾಯತಿ ವಜಾಗೊಳಿಸಿರುವುದರ ಹಿಂದಿನ ಮರ್ಮವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರದ ಕೂಪದಲ್ಲಿ ಗ್ರಾ.ಪಂ.
ಮಾವತ್ತೂರು ಗ್ರಾಮ ಪಂಚಾಯಿತಿಯಲ್ಲಿ ಕೇವಲ ಅಗ್ರಿಮೆಂಟ್ ಮೇಲೆ ಬಹಳಷ್ಟು ಇ-ಸ್ವತ್ತು ಹಾಗೂ ಖಾತೆ ಬದಲಾವಣೆಗಳಾಗಿವೆ. ಹಣ ಒಂದು ಕೊಟ್ಟರೆ ಇಲ್ಲಿನ ಅಧಿಕಾರಿ ವರ್ಗ ಯಾರ ಆಸ್ತಿಯನ್ನು ಯಾರಿಗೆ ಬೇಕಾದರೂ ಬದಲಾಯಿಸ್ತಾರೆ. ಬಹಳಷ್ಟು ವರ್ಷಗಳಿಂದ ಇರುವ ಇ-ಸ್ವತ್ತು ಹಾಗೂ ಖಾತೆಗಳನ್ನು ಸಮಯ ಬಂದಾಗ ವಜಾಗೊಳಿಸುತ್ತಾರೆ. ಇಲ್ಲವೇ ದಾಖಲಾತಿ ಇಲ್ಲದಿದ್ದರೂ ದಾಖಲಾತಿ ಸೃಷ್ಟಿಸಿ ಇ-ಸ್ವತ್ತು ಖಾತೆ ಮಾಡಿಕೊಡಲಿದ್ದಾರೆ. ಇಂಥ ಬಹಳಷ್ಟು ಪ್ರಕರಣಗಳು ಗ್ರಾಮ ಪಂಚಾಯ್ತಿಯಲ್ಲಿವೆ. ವರ್ಗ ೧, ೧೫ನೇ ಹಣಕಾಸು, ಎಸ್ಸಿ, ಎಸ್ಟಿ ಅನುದಾನ ಮೀಸಲಾತಿ, ಅಂಗವಿಕಲರ ಹಣ ದುರ್ಬಳಕೆ, ೧೫ನೇ ಹಣಕಾಸಿನಲ್ಲಿ ಇಷ್ಟಾನುಸಾರ ಹಣ ಬಳಕೆ ಸೇರಿಸಿದಂತೆ ನರೇಗಾ ಯೋಜನೆ ಸಹ ದುರ್ಬಳಕೆ ಆಗುತ್ತಿದ್ದು, ಗ್ರಾಮ ಪಂಚಾಯಿತಿ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಮೇಲ್ಪಟ್ಟ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದರೆ ಇವರ ಭ್ರಷ್ಟಾಚಾರ ಹೊರ ಬರಲಿದೆ ಎಂದು ರಾಜಾರೆಡ್ಡಿ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸಿದ್ದಾರೆ.