ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಟೆಂಡರ್ ದಿನ, ಸಮಯ ಬದಲಾವಣೆ: ಕ್ರಮಕ್ಕೆ ಒತ್ತಾಯ
ತುಮಕೂರು, ಸೆ. ೨೧- ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಟೆಂಡರ್ ದಿನ ಮತ್ತು ಸಮಯ ಬದಲಾವಣೆ ಮಾಡಿರುವುದು ರೈತ ವಿರೋಧಿ ನಿರ್ಧಾರವಾಗಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡಲು ಹೊರಟಿರುವ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿ.ಪಂ. ಸಿಇಓ ಸಿ. ಪ್ರಭು ಅವರಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯು ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದಿದ್ದು ಇತಿಹಾಸ ಸೇರಿದೆ. ೧೯೫೨ ರಲ್ಲಿ ಸ್ಥಾಪಿತವಾದ ಮಾರುಕಟ್ಟೆ ಇಲ್ಲಿಯವರೆಗೂ ರೈತರಿಗೆ ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದೆ. ಇದನ್ನು ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಸ್ವಾಗತ ಮಾಡುತ್ತವೆ. ಆದರೆ ಇತ್ತೀಚೆಗೆ ಆಡಳಿತ ಮಂಡಳಿ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡು ಅಕ್ಟೋಬರ್ ೧ ರಿಂದ ಈ ಹಿಂದೆ ಇದ್ದಂತಹ ಟೆಂಡರ್ ದಿನ ಬುಧವಾರ ಮತ್ತು ಶನಿವಾರದ ಬದಲಾಗಿ ಸೋಮವಾರ ಮತ್ತು ಗುರುವಾರ ಮಾಡಿರುವುದು ಏಕ ಪಕ್ಷೀಯ ನಿರ್ಧಾರವಾಗಿದೆ ಹಾಗೂ ಸಮಯದಲ್ಲಿಯೂ ಸಹ ಬದಲಾವಣೆ ಮಾಡಿದ್ದಾರೆ. ಮಧ್ಯಾಹ್ನ ೨ ಗಂಟೆ ಬದಲಾಗಿ ೩ ಗಂಟೆಗೆ ಟೆಂಡರ್ ಪ್ರಕ್ರಿಯೆ ಮಾಡಿದರೆ ದೇಶದ ಅನ್ನದಾತ ದೇಶದ ಜೀವನಾಡಿ ರೈತರು ತಮ್ಮ ತಮ್ಮ ಮನೆಗೆ ಹಿಂದಿರುಗಲು ದಿನನಿತ್ಯದ ಕೃಷಿ ಚಟುವಟಿಕೆ ಹೈನುಗಾರಿಕೆ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೆ ಕೆಲವು ಗ್ರಾಮಾಂತರ ಪ್ರದೇಶಗಳಿಗೆ ತಲುಪಲು ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದು ಹೋಗುವ ಸಂದರ್ಭವೂ ಕೂಡ ಇದೆ. ಅಂತಹ ಸಮಯದಲ್ಲಿ ಕಳ್ಳ ಕಾಕರ ಹಾಗೂ ಕಾಡುಪ್ರಾಣಿಗಳ ಭಯದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಎಪಿಎಂಸಿ ಮಾರುಕಟ್ಟೆಯೂ ಸಹ ಸೋಮವಾರ, ಗುರುವಾರ ನಡೆಯುವುದರಿಂದ ಎರಡು ಕಡೆ ಏಕಕಾಲದಲ್ಲಿ ರೈತರು ಬರಲು ಸಾಧ್ಯವಾಗುವುದಿಲ್ಲ. ಜತೆಗೆ ರೈತರಿಗೆ ಇದರಿಂದ ಗೊಂದಲ ವಾತಾವರಣ ನಿರ್ಮಾಣ ಮಾಡಿದಂತಾಗುತ್ತದೆ. ಇದು ಯಾರದ್ದೋ ಒತ್ತಡಕ್ಕೆ ಮಣಿದು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ. ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ಈ ಹಿಂದೆ ಇತಿಹಾಸದಿಂದ ಬಂದಿದ್ದಂತಹ ವಾರ ದಿನಗಳು ಸಮಯವನ್ನು ಯಥಾ ಸ್ಥಿತಿಯಾಗಿ ಕಾಯ್ದುಕೊಂಡು ರೈತರಿಗೆ ಅನ್ಯಾಯವಾಗದಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ತೆಂಗು ಬೆಳೆಗಾರರು ಹಾಗೂ ರೈತರೊಂದಿಗೆ ಸೇರಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ರೈತರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್, ಗೌರವ ಅಧ್ಯಕ್ಷರಾದ ಬ್ರಹ್ಮಸಂದ್ರ ಪುಟ್ಟರಾಜು, ಉಪಾಧ್ಯಕ್ಷರಾದ, ರಾಜಣ್ಣ ಬಿ.ಕೆ., ಶ್ರೀನಿವಾಸ್ ಅರಿಯೂರು, ಪ್ರಧಾನ ಕಾರ್ಯದರ್ಶಿ ಆನಂದ್ ಬಿ.ಎಂ., ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ ಗೌಡಿಹಳ್ಳಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ವೈ.ಹೆಚ್. ಹುಚ್ಚಯ್ಯ ಭಾಗವಹಿಸಿದ್ದರು.