ಮಾಲ್ ತೆರೆಯಲು ,ಗೋಲ್ ಮಾಲ್, ಗೆತ್ನಿಸಿದ ಅಧಿಕಾರಿಗೆದುರಿ ಕಾಲ್ಕಿತ್ತ ಮಾಲ್ ಮಾಲೀಕರು..!
ಸಂಜೆವಾಣಿ ವಾರ್ತೆ
ಹನೂರು ಏ 21:- ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಮಾಲ್ ಗಳು ಆರಂಭವಾಗದಿರಲು ನಗರಸಭೆಯ ಅಧಿಕಾರಿಯೊಬ್ಬರೇ ನೇರ ಕಾರಣ ಎನ್ನುವ ಕಟು ಸತ್ಯ ಸಂಗತಿ ಇದೀಗ ಬಯಲಾಗಿದೆ.
ಬಹುತೇಕ ಕಂಪನಿಗಳ ಮಾಲ್ ಗಳು ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲು ಮುಂದಾದರೂ ಈ ಅಧಿಕಾರಿಯ ಕಿರುಕುಳಕ್ಕೆ ಹೆದರಿ ಬಂದ ದಾರಿಗೆ ಸುಂಕವಿಲ್ಲದಂತೆ ಕಾಲ್ಕಿತ್ತಿರುವುದೇ ಹೆಚ್ಚು.
ಚಾಮರಾಜನಗರದಲ್ಲಿ ಮೋರ್, ರಿಲೆಯನ್ಸ್ ನಂತಹ ದೊಡ್ಡ ಪ್ರಮಾಣದ ಕಂಪನಿಗಳ ಮಾಲ್ ಗಳು ಇಲ್ಲ. ಆದರೆ ತಾಲ್ಲೂಕು ಕೇಂದ್ರವಾಗಿರುವ ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದಲ್ಲಿ ಬಹು ದೊಡ್ಡ ಕಂಪನಿಯ ಮಾಲ್ ಗಳು ಇವೆ. ಇಲ್ಲೇಕೆ ಇಲ್ಲ ಎಂದು ವಿಚಾರ ಮಾಡಿದಾಗ ಮಾಲ್ ತೆರೆಯಲು ಸ್ಥಳೀಯ ಸಂಸ್ಥೆಯ ಅನುಮತಿ ಲೈಸನ್ಸ್ ಬೇಕು. ಆ ಲೈಸನ್ಸ್ ಮಂಜೂರಾತಿಗೆ ದಾಖಲೆಗಳ ಪತ್ರ ಹಾಗೂ ಸರ್ಕಾರ ನಿಗಧಿಪಡಿಸಿರುವ ಶುಲ್ಕ ಪಾವತಿಸಿದರೆ ಸಾಕು. ಆದರೆ ನಗರಸಭೆಯಲ್ಲಿರುವ ಧನದಾಹಿ ಅಧಿಕಾರಿಯೊಬ್ಬರು ಮಾಲ್ ತೆರೆಯಲು ಅನುಮತಿ ಮತ್ತು ಲೈಸನ್ಸ್ ಮಂಜೂರಾತಿಗೆ ಭಾರೀ ಪ್ರಮಾಣದ ಹಣಕ್ಕೆ ಬೇಡಿಕೆ ಇಟ್ಟಿದ್ದೇ ಇಲ್ಲಿ ಮಾಲ್ ಗಳು ಆರಂಭವಾಗದಿರಲು ಕಾರಣವೆಂಬ ಗಂಭೀರ ಆರೋಪ ಜಗಜ್ಜಾಹೀರಾಗಿದೆ.
ಕೆಲವು ಬಂಡವಾಳಶಾಹಿಗಳು ಮಾಲ್ ತೆರೆಯಲು ಮುಂದಾಗಿದ್ದರು, ಆದರೆ ಮಾಲ್ ತೆರೆಯಲು ಬಂಡವಾಳ ಹಾಕಲು ಸಿದ್ದರಿರುವ ವ್ಯಕ್ತಿಗಳು ಲೈಸನ್ಸ್ ಮಂಜೂರಾತಿಗೆ ನಗರಸಭೆಗೆ ಅರ್ಜಿ ಹಾಕಿದರೆ ಬಂಡವಾಳದಾರರನ್ನು ಮಾತುಕತೆಗೆ ಕರೆಯಿಸಿ ತಿಂಗಳುಗಟ್ಟಲೆ ಪುಕ್ಸಟ್ಟೆ ಬಾಡೂಟ ಬಳವಳಿಯಾಗಿ ಸ್ವೀಕರಿಸಿ ಬಿಲ್ ನ್ನು ಅವರಿಂದಲೇ ಕೊಡಿಸಿ ಕೊನೆಗೆ ಲೈಸನ್ಸ್ ನೀಡಲು ಭಾರೀ ಪ್ರಮಾಣದ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು, ಇದರಿಂದ ಅಘಾತಕ್ಕೆಗೊಳಗಾದ ಬಂಡವಾಳದಾರರು ಇಲ್ಲಿನ ಸಹವಾಸವೇ ಬೇಡ ಎಂದು ಬೇರೆ ಊರಿನಲ್ಲಿ ಮಾಲ್ ತೆರೆದಿದ್ದಾರೆ.
ನಗರಸಭೆಗೆ ಈ ಮೊದಲು ಆದಾಯದ ಮೂಲವೇ ವಾಣಿಜ್ಯೋದ್ಯಮ.. ಆದರೆ ನಗರಸಭೆಯ ದುರಾಲೋಚನೆಗೆ ಪಟ್ಟಣದ ಹಳೆಯ ಪೆÇೀಲಿಸ್ ಠಾಣೆಯ ಎದುರು ,ಹಳೆ ಮಾರುಕಟ್ಟೆ ಬಳಿಯ ಮಳಿಗೆಗಳು ಹೀಗೆ ಹಲವಾರು ಆದಾಯ ಕ್ರೋಢೀಕರಣ ಮಾಡುತ್ತಿದ್ದ ಹಲವು ಮಳಿಗೆಗಳು ಧರೆಗುರುಳಿದವು.
ಇನ್ನು ಚಾಮರಾಜನಗರದ ಹಳೇ ತರಕಾರಿ ಮಾರ್ಕೆಟ್ ನ ಸ್ಥಳದಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿದ ನಗರಸಭೆಯು ವಾಣಿಜ್ಯ ಸಂಕೀರ್ಣ ನಿರ್ಮಿಸಿದೆ…. ಆದರೆ ಇದೂವರೆಗೂ ಅಲ್ಲಿ ಯಾವುದೇ ವಾಣಿಜ್ಯ ಮಳಿಗೆ ಅಥವಾ ಉದ್ಯಮ ಆರಂಭವಾಗಿಲ್ಲ. ಅತಿ ಹೆಚ್ಚು ಬಾಡಿಗೆಗೆ ಟೆಂಡರ್ ಕರೆದು ಹಾಕುವವರು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಆರಂಭಗೊಂಡ ಹಲವು ಖಾಸಗಿ ಬ್ಯಾಂಕ್ ಗಳು , ಸೂಪರ್ ಬಜಾರ್ ಗಳಿಗೆ ಪಟ್ಟಣದ ಅದು ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲಿರುವ ನಗರಸಭೆಗೆ ಯಾರು ಸಹ ಬಾರದಿರುವುದಕ್ಕೆ ಧನದಾಹಿ ಅಧಿಕಾರಿಯ ಹಿನ್ನಲೆಯೇ ಮೂಲ ಕಾರಣ.
ಸುಸಜ್ಜಿತವಾದ ವಾಣಿಜ್ಯ ಕಟ್ಟಡ ನಿರ್ಮಾಣವಾಗಿದ್ದರೂ ಸಹ ಕಟ್ಟಡ ದೂಳು ಹಿಡಿದು ಅವಸಾನದತ್ತ ಸಾಗಿದೆಯೇ ವಿನಹ ಯಾವುದೇ ರೀತಿಯ ಆದಾಯ ನಗರಸಭೆಗೆ ಬರುತ್ತಿಲ್ಲ. ಅಧಿಕಾರಿಗೆ ಆದಾಯ ಬಂದರೆ ತಾನೇ ನಗರಸಭೆಗೆ ಬರೋದು ಎಂಬಂತಾಗಿದೆ ಪರಿಸ್ಥಿತಿ.ಈ ಬಗ್ಗೆ ಜಿಲ್ಲಾಧಿಕಾರಿಗಳು/ಆಡಳಿತಾಧಿಕಾರಿಗಳು ಗಮನಹರಿಸಿಲ್ಲದಿರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸಾರ್ವಜನಿಕರಿಗೆ ಕೈಗೆಟುಕುವ ಧರದಲ್ಲಿ ನಿತ್ಯ ಬಳಕೆಯ ಸಾಮಗ್ರಿಗಳು ಮತ್ತು ದವಸ ಧಾನ್ಯ ಸಿಗುವಂತೆ ಆಗಲು ದೊಡ್ಡ ಕಂಪನಿಯ ಮಾಲ್ ಗಳು ಆರಂಭವಾದರೆ ತಾನೆ ಇದೆಲ್ಲಾ ಸಾಧ್ಯ. ಸಂಬಂಧಿಸಿದ ಅಧಿಕಾರಿಯೇ ಧನ ಪಿಶಾಚಿಯಾದರೆ ಹೇಗೆ ತಾನೆ ಬಂಡವಾಳ ಹಾಕುವವರು ಮಾಲ್ ಗಳನ್ನು ನಡೆಸಲು ಮುಂದೆ ಬರುತ್ತಾರೆ. ಅಧಿಕಾರಿಯ ಅಕ್ರಮ ಸುಲಿಗೆಯಲ್ಲಿ ಮೇಲಾಧಿಕಾರಿಗಳಿಗೂ ಪಾಲಿದೆ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ. ಹೀಗೆ ಹಲವು ಧನಾತ್ಮಕ ಅಂಶಗಳನ್ನು ಮರೆತ ಅನ್ಯ ಇಲಾಖೆಯ ಅಧಿಕಾರಿಗೆ ಹೇಗೆ ತಾನೆ ನಗರಸಭೆಯ ಮೂಲ ಸೌಕರ್ಯವನ್ನು ಪೂರೈಸಲು ಸಾಧ್ಯ…!
ಇದರೆಲ್ಲದರ ನಡುವೆ ಗುತ್ತಿಗೆ ನೌಕರರ ಸಂಬಳ ವಿಳಂಬ , ಬೀದಿ ದೀಪ ನಿರ್ವಹಣಾ ವೆಚ್ಚ ಹಲವು ತಿಂಗಳುಗಳಿಂದ ವಿಳಂಬ , ನೀರು ಸರಬರಾಜು , ರಿಪೇರಿ ನೌಕರರ ಸಂಬಳ ವಿಳಂಬ ಹೀಗೆ ಹಲವು ವಿಳಂಬಗಳ ನಡುವೆ ಮಾಲ್ ತೆರೆಯಲು ಅನುಮತಿ ನೀಡಲು ಗೋಲ್ ಮಾಲ್ ಮಾಡುವ ಈ ಪರಿಯ ಅಧಿಕಾರಿಯಿಂದ ಜಿಲ್ಲಾ ಕೇಂದ್ರ ಸ್ಥಾನದ ನಗರಸಭೆ ಅಭಿವೃದ್ಧಿ ಹೊಂದಬಹುದೆ ಎನ್ನುವುದನ್ನು ಮಾನ್ಯ ನಗರಸಭೆ ಆಡಳಿತಾಧಿಕಾರಿಗಳೆ ನಿರ್ಧರಿಸಿಬೇಕು….?