ನೀರಿನ ಕರ ಪಾವತಿಸುವ ಸಮಯದಲ್ಲಿ ಬದಲಾವಣೆ
ಕಲಬುರಗಿ:ಏ.20:ಸಾರ್ವಜನಿಕರ ಕೋರಿಕೆಯ ಮೇರೆಗೆ ಕಲಬುರಗಿ ನಗರದಲ್ಲಿರುವ ಗ್ರಾಹಕರ ಸೇವಾ ಕೇಂದ್ರಗಳಲ್ಲಿ ನೀರಿನ ಕರ ಪಾವತಿಯ ಸಮಯವನ್ನು ಬೆಳಿಗ್ಗೆ 8.30 ರಿಂದ ಸಾಯಂಕಾಲ 5 ಗಂಟೆಯವರೆಗೆ ಬದಲಾವಣೆ ಮಾಡಲಾಗಿದ್ದು, ಕಲಬುರಗಿ ನಗರದ ಸಾರ್ವಜನಿಕರು ಇದಕ್ಕೆ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲ ಮೂಲ ನದಿಯಾದ ಭೀಮಾ ಹಾಗೂ ಬೆಣ್ಣೋತೋರಾ ನದಿಯಿಂದ ನಿಂತ ನೀರು ಬರುತ್ತಿರುವುದರಿಂದ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ಆದಗ್ಯೂ ಮುಂಜಾಗ್ರತಾ ಕ್ರಮವಾಗಿ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕು.
ವಿಶ್ವಬ್ಯಾಂಕ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ ಕಲಬುರಗಿ ಮಹಾನಗರದಲ್ಲಿ 24×7 ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿಗಳ ಅನುಷ್ಠಾನಗೊಳ್ಳುತ್ತಿದ್ದು, ಹಾಲಿ ಇರುವ ನೀರು ಸರಬರಾಜು ವ್ಯವಸ್ಥೆಯನ್ನು ಮೆ|| ಎಲ್ ಆ್ಯಂಡ್ ಟಿ ಕಂಪನಿಯು ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.