ವಿದ್ಯಾರ್ಥಿನಿ ಹತ್ಯೆಗೆ ಎಐಡಿವೈಒ ಆಕ್ರೋಶ
ಕಲಬುರಗಿ,ಏ.20: ಹುಬ್ಬಳ್ಳಿಯ ಕಾಲೇಜಿನಲ್ಲಿ ದಾರುಣವಾಗಿ ಕೊಲೆಗೀಡಾದ ವಿದ್ಯಾರ್ಥಿನಿಯ ಸಾವಿನ ಬಗ್ಗೆ ಎಐಡಿವೈಓ ರಾಜ್ಯ ಸಮಿತಿಯು ತನ್ನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಆರೋಪಿಯನ್ನು ತ್ವರಿತವಾಗಿ ಬಂಧಿಸಿರುವುದು ಅಲ್ಪ ಸಮಾಧಾನದ ವಿಷಯವಾಗಿದ್ದರೂ ಆ ಹತ್ಯೆಯ ಬರ್ಬರತೆ ಎದೆ ಝಲ್ಲೆನ್ನಿಸುವಂತಹದ್ದು. ಒಂದು ಅಮಾಯಕ ಜೀವವು ವಿಕೃತ ಸನ್ನಿವೇಶದಲ್ಲಿ ಇಲ್ಲಿ ಬಲಿಯಾಗಿದೆ. ಆರೋಪಿಯು ನಡೆಸಿರುವ ಅಪರಾಧವು ಬಹಳ ವೇಗವಾಗಿ ಸಾಬೀತಾಗಿ ಕಾನೂನಿನ ಅನ್ವಯ ಆತನಿಗೆ ಅತ್ಯುಗ್ರವಾದ ಹಾಗೂ ನಿದರ್ಶನೀಯವಾದ ಶಿಕ್ಷೆಯಾಗಬೇಕು. ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಾವಿಗೀಡಾದ ವಿದ್ಯಾರ್ಥಿನಿಗೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಎಐಡಿವೈಒ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ,ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್ ಆಗ್ರಹಿಸಿದ್ದಾರೆ.