ದಿವ್ಯಾ ಜೊತೆ ಜಾಧವ್ ಫೋಟೊ; ಕಾಂಗ್ರೆಸ್ ದೂರು
ಕಲಬುರಗಿ:ಏ.20: ಪಿ.ಎಸ್.ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜೊತೆಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕುರಿತು ಕಾಂಗ್ರೆಸ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷ ಎನ್. ದಿವಾಕರ್, ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬೆಂಗಳೂರಿನ ಚುನಾವಣೆ ಆಯೋಗದ ಕಚೇರಿಗೆ ತೆರಳಿ ಈ ಕುರಿತು ದೂರು ಸಲ್ಲಿಸಿದ್ದಾರೆ.
ಪಿ.ಎಸ್.ಐ ನೇಮಕಾತಿ ಹಗರಣದ ಆರೋಪಿ ದಿವ್ಯಾಹಾಗರಗಿ ವಿರುದ್ದ ತನಿಖೆ ನಡೆಯುತ್ತಿದೆ. ಹಲವಾರು ಷರತ್ತುಗಳ ಮೇಲೆ ಅವರು ಜಾಮೀನು ಪಡೆದಿದ್ದಾರೆ. ಹೀಗಿರುವಾಗ ಬಿಜೆಪಿ ಅಭ್ಯರ್ಥಿ ಆರೋಪಿಯನ್ನು ಭೇಟಿಯಾಗಿ ಅವರೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ನ್ಯಾಯಾಲಯದ ಷರತ್ತುಗಳ ಉಲ್ಲಂಘನೆ ಆಗಿದೆ. ಜೊತೆಗೆ, ಪ್ರಭಾವ ಬಳಸಿಕೊಂಡು ತನಿಖೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಆರೋಪಿಯನ್ನು ಭೇಟಿ ಮಾಡಿ ಬೆಂಬಲ ಕೇಳುವ ನಡುವಳಿಕೆಗಳು ಕಾನೂನಿನ ಪಾವಿತ್ರ್ಯತೆ ಹಾಳು ಮಾಡುವುದು ಮಾತ್ರವಲ್ಲ; ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಚುನಾವಣಾ‌ ಆಯೋಗ ಕೂಡಲೇ ಮಧ್ಯೆ ಪ್ರವೇಶಿಸಿ ಕಾನೂನು‌ ವ್ಯವಸ್ಥೆಯ ಪಾವಿತ್ರ್ಯತೆ ಮತ್ತು ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.