ವ್ಯಾಸ ಸಾಹಿತ್ಯ ವಿಚಾರ ವಾಹಿನಿಯಿಂದ ಪ್ರಶ್ನೋತ್ತರ
ಕಲಬುರಗಿ,ಏ.20: ಭೋಜನ ಏಕೆ ಮತ್ತು ಹೇಗೆ ಮಾಡಬೇಕು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಪಂ. ಗೋಪಾಲಾಚಾರ್ಯ ಅಕಮಂಚಿ ಹೇಳಿದರು.
ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ವ್ಯಾಸ ಸಾಹಿತ್ಯ ವಿಚಾರ ವಾಹಿನಿ ಹಮ್ಮಿಕೊಂಡಿದ್ದ ಪ್ರಶ್ನೋತ್ತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೇವಲ ಹಸಿವು ಇಂಗಿಸುವುದಕ್ಕಾಗಿ ಮಾಡುವ ಕ್ರಿಯೆಯೇ ಊಟವಲ್ಲ. ಭೋಜನ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಊಟ ಮಾಡುವುದು ಕೂಡ ಭಗವಂತನಿಗೆ ಸಲ್ಲಿಸುವ ಒಂದು ಪ್ರಕಾರದ ಪೂಜೆ ಇದ್ದಂತೆ. ಭೋಜನ ಭಗವಂತನ ಯಜ್ಞ ಎಂದು ತಿಳಿದುಕೊಳ್ಳಬೇಕು.ಕೆಳಗೆ ಕುಳಿತುಕೊಂಡು ಊಟ ಮಾಡಬೇಕು. ಭೋಜನ ಮಾಡುವಾಗ ಮಾತನಾಡಬಾರದು, ಬೆಳಕಿನಲ್ಲಿಯೇ ಊಟ ಮಾಡಬೇಕು ಎಂಬ ನಿಯಮಗಳಿವೆ ಯಾವುದೇ ಕಾರ್ಯ ತಿಳಿಯದೇ ಮಾಡಬಾರದು, ಭೋಜನ ಕೂಡ ತಿಳಿದು ಮಾಡಬೇಕು. ಹಸಿವೆಯಾಗಿದೆ ಎಂದು ಸಿಕ್ಕ ಪದಾರ್ಥ ತಿಂದರೆ ಪಶುಗಳಿಗೂ ನಮಗೂ ವ್ಯತ್ಯಾಸವೇ ಇರುವುದಿಲ್ಲ ಎಂದರು.
ಹೊಟ್ಟೆಯಲ್ಲಿ ನಾಲ್ಕು ಭಾಗ ವಿಂಗಡಿಸಬೇಕು. ಎರಡು ಭಾಗದಷ್ಟು ಮಾತ್ರ ಊಟ ಮಾಡಬೇಕು ಒಂದುಭಾಗದಲ್ಲಿ ನೀರು, ಇನ್ನೊಂದುಭಾಗದಲ್ಲಿ ಗಾಳಿಗೆ ಅವಕಾಶ ಮಾಡಿಕೊಡಬೇಕು. ನಾವು ನೀರು, ಗಾಳಿಗೆ ಮೀಸಲಿರುವ ಭಾಗದಲ್ಲೂ ಅನ್ಮವನ್ನು ತುಂಬುತ್ತೇವೆ. ಹೀಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ನಮ್ಮ ಪೂರ್ವಜರು ಭೋಜನ ಪದ್ಧತಿ ಅರಿತಿದ್ದರು. ಹೀಗಾಗಿ ಅವರು ನೂರಾರು ವರ್ಷ ಬದುಕುತ್ತಿದ್ದರು ಎಂದು ಹೇಳಿದರು.ಭೋಜನ ಬಗ್ಗೆ ಅನೇಕರು ಪ್ರಶ್ನೆಗಳನ್ನು ಕೇಳಿ ಸಮರ್ಥ ಉತ್ತರ ಪಡೆದು ತಮ್ಮಲ್ಲಿದ್ದ ಸಂದೇಹಕ್ಕೆ ಪರಿಹಾರ ಕಂಡುಕೊಂಡರು.
ಉದ್ಯಮಿ ರಂಗನಾಥ ದೇಸಾಯಿ, ಶಾಮರಾವ ಚಿಂಚೋಳಿ,ಮಂದಿರದ ಅರ್ಚಕ ಗುಂಡಾಚಾರ್ಯ ಜೋಶಿ ನರಬೋಳಿ,ಡಿ ವಿ ಕುಲಕರ್ಣಿ ವೇದಿಕೆ ಮೇಲಿದ್ದರು. ವಾಹಿನಿಯ ಸಂಚಾಲಕ ರವಿ ಲಾತೂರಕರ್ ನಿರೂಪಿಸಿದರು ರವೀಂದ್ರ ಜೋಶಿ ಪ್ರಾಥಿಸಿದರು.
ಪದ್ಮನಾಭ ಆಚಾರ್ಯ ಜೋಶಿ, ಸುರೇಶ ಕುಲಕರ್ಣಿ, ನರಸಿಂಗರಾವ ಕುಲಕರ್ಣಿ, ಗುರುರಾಜ ದೇಸಾಯಿ, ಗೋಪಾಲ ಅಧ್ಯಾಪಕ,ಡಾ ರವಿ ಕುಲಕರ್ಣಿ,ಬದರಿ ಬಡಗಿ,ರಾಜಾ ಬಾಜಿ, ಪಾಲ್ಗೊಂಡಿದ್ದರು.