ಶಾಂತಿ ನೆಮ್ಮದಿ ನೆಲೆಸಲು ಚೌಡಯ್ಯನವರ ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ : ನಿಂಗಣ್ಣಾ ನಂದಿಹಳ್ಳಿ
ಬೀದರ್:ಏ.20: 12ನೇ ಶತಮಾನದಲ್ಲಿ ಟೀಕಾ ಪ್ರಹಾರವಾದ ವಚನ ಸಾಹಿತ್ಯದ ಮೂಲಕ ಕ್ರಾಂತಿಗೈದ ನಿಜ ಶರಣ ಅಂಬಿಗರ ಚೌಡಯ್ಯರವರ ವಚನಗಳನ್ನು ಪುಸ್ತಕದ ರೂಪದಲ್ಲಿ ಜ್ಯೋತಿ ಯಾತ್ರೆಯ ಮೂಲಕ ಮನೆ, ಮನೆಗಳಿಗೆ ತಲುಪಿಸುವ ಮಹತ್ಕಾರ್ಯ ಮಾಡುತ್ತಿರುವ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಭಂಕೂರ್ ಗ್ರಾಮದ ಲಿಂಗಪ್ಪಾ ನಂದಿಹಳ್ಳಿ ಅವರ ಕಾರ್ಯ ಪ್ರಶಂಸನೀಯವಾಗಿದೆ ಎಂದು ಟೋಕರೆ ಕೋಳಿ ಸಮಾಜ ಸಂಘದ ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಶನ್ಮೂಖಪ್ಪಾ ಶೇಕಾಪೂರ್ ಅವರು ಹೇಳಿದರು.
ಅವರು ಶುಕ್ರವಾರ ಬೆಳಿಗ್ಗೆ ಮನ್ನಾಎಖೆಳ್ಳಿಯ ನಿಡವಂಚಾ ರಸ್ತೆಯಲ್ಲಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ದೇವಸ್ಥಾನದ ಆವರಣದಲ್ಲಿ ಅಂಬಿಗರ ಚೌಡಯ್ಯ ಜ್ಯೋತಿಯಾತ್ರೆಗೆ ಸ್ವಾಗತಿಸಿ ಯಾತ್ರೆಯ ನಿಂಗಣ್ಣಾ ನಂದಿಹಳ್ಳಿರವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡುತ್ತಿದ್ದರು.
ಭಂಕೂರನಿಂದ ಏಪ್ರೀಲ್ 11 ರಂದು ಜ್ಯೋತಿ ಯಾತ್ರೆ ಪ್ರಾರಂಭ ಮಾಡಿದ್ದು, 26ಕ್ಕೆ ವಾಪಾಸ್ ತಲುಪಲಿದೆ. ಕಳೆದ ಐದು ವರ್ಷದಿಂದ ಪ್ರತಿ ವರ್ಷವೂ ಆಯ್ದ ಭಾಗಗಳಲ್ಲಿ ಯಾತ್ರೆ ಕೈಗೊಂಡಿರುವರು. ಈಗಾಗಲೇ ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಉಳಿದ ಭಾಗಗಳಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆಂದು ಶನ್ಮೂಖಪ್ಪಾ ಶೇಕಾಪೂರ್ ತಿಳಿದರು.
ನಿಂಗಣ್ಣಾ ನಂದಿಹಳ್ಳಿ ಅವರು ಮಾತನಾಡಿ, ನಿಜ ಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯದ ಸಾರವನ್ನು ಜನತೆಗೆ ತಿಳಿಹೇಳಿ, ಅವರ ವಚನಗಳುಳ್ಳ ಸಾಹಿತ್ಯದ ಪ್ರಕಟಣೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇನೆ. ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಿ ಸಮಾಧಾನದಿಂದ ಬಾಳುವಂತಾಗಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಲಾಲಪ್ಪಾ ಪೋಲಕಪಳ್ಳಿ, ಗೋಪಾಲ್ ನಿಡವಂಚಾ, ಶಿವಕುಮಾರ ಹಳ್ಳಿಖೇಡ, ಉಮೇಶ ನಾಟಿಕಾರ್, ವಿಜಯಕುಮಾರ ಹಂದಿಕೇರಾ, ನಾಗೇಂದ್ರ ವಗ್ಗೆರ್, ಮಹಾಂತೇಶ ಬಂಬುಳಗಿ, ತುಕಾರಾಮ್ ವಗ್ಗೆರ್, ಜಗನ್ನಾಥ ಗಂಗಮಪಳ್ಳಿ, ಶಿವಕುಮಾರ ಮಂದಾ, ಮಾಣೀಕ ಭೂತಾಳಿ, ರಾಮಲಿಂಗ ನಾಟೀಕಾರ್, ವೈಜಿನಾಥ ಹಳ್ಳಿಖೇಡ್, ಭಕ್ತಕುಮಾರ್ ಜಮಾದಾರ್, ಲೋಕೇಶ ಔಂಟಿ, ಈರಪ್ಪಾ ಪೂಜಾರಿ, ಆಗುಣ ಜಮಾದಾರ್ ಸೇರಿದಂತೆ ಇತರರು ಇದ್ದರು.