ಪ್ರತಿಯೊಬ್ಬರೂ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಿ
ಬಾಗಲಕೋಟೆ:ಏ.20: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದು, ಪ್ರತಿಯೊಬ್ಬರೂ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಅಂಚೆ ಇಲಾಖೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತ, ನಮ್ಮ ಹಕ್ಕು ಪ್ರತಿಯೊಬ್ಬರು ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ತನ್ನ ಕರ್ತವ್ಯವನ್ನು ನಿಭಾಯಿಸಬೇಕು. ಪ್ರತಿಶತ ನೂರರಷ್ಟು ಮತದಾನ ಆಗಬೇಕು. ನಿಮ್ಮ ಮೂಲಕ ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸುವಂತೆ ಮಾಡಬೇಕೆಂದರು.
ಬರುವ ಮೇ 7 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಬಗೆಯ ವಿಶೇಷ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ಆಯೋಜನೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಉದ್ದೇಶದೊಂದಿಗೆ ಸ್ವೀಪ್ ಕಾರ್ಯ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸ್ವೀಪ್ ಸಮಿತಿ ಮೂಲಕ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಮತದಾನ ಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ನಮ್ಮದು ಪ್ರಜಾಪ್ರಭುತ್ವ ದೇಶ, ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದರು.
ಜಿಲ್ಲಾ ಅಂಚೆ ಅಧಿಕ್ಷಕರಾದ ಎಚ್.ಬಿ.ಹಸಬಿ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಅಂಚೆ ಇಲಾಖೆಯು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ. ಅಂಚೆ ಕಚೇರಿಯಲ್ಲಿ ಸ್ವೀಕರಿಸುವ ಹಾಗೂ ರವಾನಿಸುವ ಪತ್ರಗಳ ಮುಖಾಂತರ ಮತದಾನ ಮಾಡುವ ಕುರಿತಾಗಿ ಮತದಾರರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ ಕುರೇರ ಮತದಾನ ಪ್ರತಿಜ್ಞಾವಿಧಿ ಬೊಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಶಿಶಕಾಂತ ಶಿವಪುರೆ, ಮುಖ್ಯ ಲೆಕ್ಕಾಧಿಕಾರಿ ಸಿದ್ದರೇಮೇಶ್ವರ ಉಕ್ಕಲಿ, ಬಾಗಲಕೋಟೆ ಸಹಾಯಕ ಅಂಚೆ ಅಧಿಕ್ಷಕರಾದ ಸಿ.ಜಿ.ಕಾಂಬ್ಳೆ, ಎಂ.ಎ.ಬಗವಾನ, ಫೆÇೀಸ್ಟ ಮಾಸ್ಟರ್ ಎಸ್.ಎಂ.ಜೋಶಿ, ಎನ್.ಆರ್.ಮೋರೆ ಸೇರಿದಂತೆ ಜಿಲ್ಲಾ ಪಂಚಾಯತಿಯ ಹಾಗೂ ಅಂಚೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿರಿದ್ದರು. ಮತದಾನ ಜಾಗೃತಿ ಅಭಿಯಾನವು ಅಂಚೆ ಕಚೇರಿ ಮೂಲಕ ಬಸವೇಶ್ವರ ವೃತ್ತದಿಂದ ಸಾಗಿ ನಾನಾ ಕಡೆಗಳಲ್ಲಿ ಸಂಚರಿಸಿತು.