ಶಿವಮೊಗ್ಗದಲ್ಲಿ ಗುಡುಗು ಸಹಿತ ಮಳೆ
ಶಿವಮೊಗ್ಗ, ಏ. ೨೦: ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದೆ. ಶುಕ್ರವಾರ ಸಂಜೆ ಧಾರಾಕಾರ ವರ್ಷಧಾರೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ, ಶನಿವಾರ ಮುಂಜಾನೆಯೇ ಗುಡುಗು – ಸಿಡಿಲು ಸಹಿತ ಮಳೆಸುರಿದಿದ್ದು ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದ್ದಾನೆ.
ಕಳೆದ ಹಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕಣ್ಮರೆಯಾಗಿತ್ತು. ಬಿಸಿಲ ತಾಪ ಹೆಚ್ಚಾಗಿತ್ತು. ಇದು ನಾಗರೀಕರನ್ನು ಹೈರಾಣಾಗುವಂತೆ ಮಾಡಿತ್ತು.
ಮತ್ತೊಂದೆಡೆ, ತಾಪಮಾನ ಹೆಚ್ಚಳದಿಂದ ಕೆರೆಕಟ್ಟೆಗಳಲ್ಲಿ ನೀರು ಬರಿದಾಗಲಾರಂಭಿಸಿತ್ತು. ಅಂತರ್ಜಲ ಕುಸಿತದಿಂದ ಬೋರ್’ವೆಲ್ ಗಳಲ್ಲಿ ನೀರಿನ ಸಂಗ್ರಹ ಕುಸಿದಿತ್ತು ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಈ ನಡುವೆ ಬೀಳುತ್ತಿರುವ ಬೇಸಿಗೆ ಮಳೆಯು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇನ್ನಷ್ಟು ದಿನಗಳ ಕಾಲ ಮಳೆ ಮುಂದುವರಿದರೆ ಸಾಕಷ್ಟು ಅನುಕೂಲವಾಗಲಿದೆ ಎಂಬುವುದು ನಾಗರೀಕರ ಅಭಿಪ್ರಾಯವಾಗಿದೆ.
ಸಿಡಿಲು ಬಡಿದು ಓರ್ವ ಸಾವು ಮತ್ತೋರ್ವನಿಗೆ ಗಾಯ!
ಸಿಡಿಲು ಬಡಿತದಿಂದ ಯುವಕನೋರ್ವ ಮೃತಪಟ್ಟು, ಮತ್ತೋರ್ವರು ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ನಡೆದಿದೆ.
ಹರಮಘಟ್ಟ ಗ್ರಾಮದ ನಿವಾಸಿ ರಾಕೇಶ್ (೩೦) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ರುದ್ರೇಶ್ ಎಂಬುವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.