ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ
ಆನೇಕಲ್.ಏ.೨೦:ರಾಜ್ಯವನ್ನು ಲೂಟಿ ಹೊಡೆದು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆ ಬಳಿಕ ಬಿದ್ದು ಹೋಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.
ಅವರು ಪಟ್ಟಣದ ಶ್ರೀರಾಮ ಕುಟೀರದ ಆವರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನಲವತ್ತು, ಐವತ್ತು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸಿಗರು ದೇಶವನ್ನು ಅಭಿವೃದ್ದಿ ಮಾಡಿಲ್ಲ, ಈ ದೇಶವನ್ನು ಅಭಿವೃದ್ದಿ ಪಡಿಸಲು ನರೇಂದ್ರ ಮೋದಿರವರು ಬರಬೇಕಾಯಿತು ಎಂದರು. ಪರಿಶಿಷ್ಟ ಜಾತಿಗೆ ಕೊಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರೆಂಟಿಗಳಿಗಾಗಿ ಬಳಸಿ ಬಡ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ಯಾರೇ ಆದರೂ ದೇವರು ಮೆಚ್ಚುವ ಕೆಲಸ ಮಾಡ ಬೇಕು ಎಂದರು. ಎನ್.ಡಿ.ಎ. ಅಭ್ಯರ್ಥಿ ಡಾ|| ಸಿ.ಎನ್. ಮಂಜುನಾಥ್ ರವರು ಉತ್ತಮ ಅಭ್ಯರ್ಥಿ ಯಾಗಿದ್ದು ಏಪ್ರಿಲ್ ೨೬ ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದ ಜನತೆ ಡಾ|| ಸಿ.ಎನ್. ಮಂಜುನಾಥ್ ರವರಿಗೆ ಬೆಂಬಲ ಸೂಚಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಕೈಜೋಡಿಸಿ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಟ್ಟಾಗಿ ಸೇರಿ ಬಿಜೆಪಿ ಅಭ್ಯರ್ಥಿ ಡಾ|| ಸಿ.ಎನ್. ಮಂಜುನಾಥ್ ರವರಿಗೆ ಆನೇಕಲ್ ಕ್ಷೇತ್ರದಲ್ಲಿ ಕನಿಷ್ಠ ೧೫ ಸಾವಿರ ಮತಗಳನ್ನು ಲೀಡ್ ಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಡಾ. ಸಿಎನ್.ಅಶ್ವಥ್ ನಾರಾಯಣ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ. ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ, ವಿಧಾನ ಪರಿಷತ್ ಸದಸ್ಯರಾದ ತುಳಸಿ ಮುನಿರಾಜು, ಗೋಪಿನಾಥ್ ರೆಡ್ಡಿ, ಅ.ದೇವೇಗೌಡರು. ಬಿಜೆಪಿ ಮುಖಂಡರಾದ ಹುಲ್ಲಳ್ಳಿ ಶ್ರೀನಿವಾಸ್, ಆನೇಕಲ್ ಬಿಜೆಪಿ ಮಂಡಲದ ಅಧ್ಯಕ್ಷರಾದ ನಾಯನಹಳ್ಳಿ ಮುನಿರಾಜುಗೌಡ, ಜೆಡಿಎಸ್ ಪಕ್ಷದ ಆನೇಕಲ್ ತಾಲ್ಲೂಕು ಅಧ್ಯಕ್ಷ ದೇವೇಗೌಡರು, ಅತ್ತಿಬೆಲೆ ಬಿಜೆಪಿ ಮಂಡಲದ ಅಧ್ಯಕ್ಷ ಬಿಬಿಐ ರಾಜು. ಸರ್ಜಾಪುರ. ಮಂಡಲದ ಅಧ್ಯಕ್ಷರಾದ ಸುರೇಶ್ ರೆಡ್ಡಿ ಮತ್ತು ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.