ಎಚ್‍ಡಿಕೆ ಹೇಳಿಕೆಗೆ ರಾಣಿ ಸತೀಶ್ ಖಂಡನೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.20:- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಮಾಜಿ ಸಚಿವರಾದ ರಾಣಿ ಸತೀಶ್ ಖಂಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳಿಂದ ಮಹಿಳೆಯರು ಲೌಕಿಕ ಬದುಕಿನಲ್ಲಿ ತಿಳುವಳಿಕೆ ಹೆಚ್ಚಾಗಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣದಿಂದ ಉದ್ದೇಶದಿಂದ ಗ್ಯಾರಂಟಿಗಳನ್ನು ನೀಡಲಾಗಿದೆ. ಆದರೆ, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲಘುವಾಗಿ ಮಾತನಾಡಿರುವುದು ಖಂಡನೀಯ. ಮಾಜಿ ಮುಖ್ಯಮಂತ್ರಿಯೋರ್ವರು ಇಂತಹ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಹೇಳಿದರು.
60 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಮತ್ತು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಇಂದು ದೇಶ ಅಭಿವೃದ್ಧಿಯಿಂದ ಏನಾದರೂ ಬೆಳೆದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಹತ್ತು ವರ್ಷಗಳಿಂದ ಏನು ಸಾಧನೆಯಾಗಿದೆ ಎಂಬುದನ್ನು ಬಿಜೆಪಿಗರು ಹೇಳಲಿ ಎಂದು ಸವಾಲು ಹಾಕಿದರು.
ಇಂದಿರಾ ಗಾಂಧಿ ಅವರು 20 ಕಾರ್ಯಕ್ರಮಗಳ ಅನುಷ್ಠಾನದಿಂದ ದೇಶದ ಜನರ ಬದುಕು ಸುಧಾರಿಸುವಂತಾಯಿತು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಹೀಗೆಳೆಯುವ ಕೆಲಸವನ್ನು ಬಿಜೆಪಿಗರು ಮಾಡಬಾರದು. ಕಳೆದ ವಿಧಾನ ಸಭಾ ಚುನಾವಣೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಮತ್ತು ನುಡಿದಂತೆ ನಡೆದ ಹಿನ್ನೆಲೆಯಲ್ಲಿ ಮತ ಕೇಳುತ್ತಿದ್ದೇವೆ. ಬಿಜೆಪಿ ಅವರು ಯಾವ ಆಧಾರದ ಮೇಲೆ ಮತ ಕೇಳುತ್ತಿದೆ ಎಂದು ಪ್ರಶ್ನಿಸಿದರು.
ಉತ್ತಮರಿಗೆ ಮತ ನೀಡಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು. ಉತ್ತಮರಿಗೆ ಮತದಾನ ಮಾಡುವ ಮೂಲಕ ಮತದಾನದ ಮೌಲ್ಯವನ್ನು ಹೆಚ್ಚಿಸಬೇಕು.
ಈ ನಿಟ್ಟಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಓರ್ವ ಸಜ್ಜನ ರಾಜಕಾರಣಿ. ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿತ್ವ ಉಳ್ಳವರಾಗಿದ್ದು, ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ, ಮೋದಮಣಿ, ಕಾಂಗ್ರೆಸ್ ಮುಖಂಡರಾದ ಲತಾ ಮೋಹನ್, ಶಾರದ ಸಂಪತ್ತು, ಚಂದ್ರಕಲಾ, ಕೃಷ್ಣಕುಮಾರಿ, ನಗರಾಧ್ಯಕ್ಷರಾದ ಆರ್. ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.