ಕಾಂಗ್ರೆಸ್‍ಗೆ ಇಲ್ಲ ಒಕ್ಕಲಿಗರ ಬೆಂಬಲ: ಪ್ರಶಾಂತ್ ಗೌಡ
ಸಂಜೆವಾಣಿ ನ್ಯೂಸ್
ಮೈಸೂರು: ಏ.20:- ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಒಕ್ಕಲಿಗ ಸಮುದಾಯದ ಅಭ್ಯರ್ಥಿಯಾದ ಎಂ.ಲಕ್ಷ್ಮಣ್‍ಗೆ ಮೈಸೂರು ಜಿಲ್ಲೆ(ಚಾಮರಾಜನಗರ ಜಿಲ್ಲೆ ಒಳಗೊಂಡು) ಒಕ್ಕಲಿಗರ ಸಂಘ ಬೆಂಬಲ ಸೂಚಿಸಿಲ್ಲ ಎಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಿ.ಪ್ರಶಾಂತ್ ಗೌಡ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಮತ್ತು ಕೆಲ ನಿರ್ದೇಶಕರು ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಸಂಘ ಬೆಂಬಲ ನೀಡುತ್ತದೆ ಎಂದು ತಿಳಿಸಿರುವುದಕ್ಕೆ ತಮ್ಮ ವಿರೋಧವಿದೆ. ಇದು ಸಂಘದ ನಿರ್ಧಾರ ಎಂದು ಅವರು ತಿಳಿಸಿರುವುದು ಸರಿಯಲ್ಲ. ಒಮ್ಮತದಿಂದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಲವರು ಬೆಂಬಲ ಸೂಚಿಸಿದ್ದಾರೆ ಎಂದರು.
ಒಕ್ಕಲಿಗರ ಸಂಘವು ಸುಮಾರು 75 ವರ್ಷಗಳಿಂದ ಸಮುದಾಯದ ಯುವ ಪೀಳಿಗೆ ಭವಿಷ್ಯ ಸೃಷ್ಟಿಸಲು, ರೈತಾಪಿ ವರ್ಗದ ಏಳಿಗೆಗೆ ರಾಜಕೀಯ, ಶೈಕ್ಷಣಿಕ, ಉದ್ಯೋಗ ಹೀಗೆ ಹಲವಾರು ರಂಗಗಳಲ್ಲಿ ಶ್ರಮಿಸಿದ್ದಾರೆ. ಆದರೆ ಇದನ್ನು ಮರೆತು ಇವರ ಏಕಾಏಕೆ ವ್ಯಕ್ತಿಗತವಾಗಿ ಒಂದು ಪಕ್ಷದ ಬೆಂಬಲ ಘೋಷಿಸಿರುವುದ ತಪ್ಪು. ಅಲ್ಲದೆ, ಒಕ್ಕಲಿಗ ಸಮುದಾಯದವರು ಜೆಡಿಎಸ್. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸುವುದರ ಬದಲು ಇವರು ನೀಡಿರುವ ಹೇಳಿಕೆ ಸಮುದಾಯದಲ್ಲಿ ಒಡಕುಂಟು ಮಾಡಿದೆ. ಸಂಘದ ಬೈಲಾದ ವಿರುದ್ಧ ಅಧ್ಯಕ್ಷರು ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ ಎಂದರು.
ಸಂಘದ ನಿರ್ದೇಶಕರೂ ಆದ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‍ಗೌಡ ಮಾತನಾಡಿ, ಸಂಘದ ಬೈಲಾದ ಪ್ರಕಾರ ಯಾವುದೇ ರಾಜಕೀಯ ವ್ಯಕ್ತಿಗೆ ಬೆಂಬಲ ಸೂಚಿಸುವಂತಿಲ್ಲ. ಆದರೆ, ಸಂಘದ ನಿರ್ದೇಶಕರು ಬೆಂಬಲ ಸೂಚಿಸಿರುವುದು ಸರಿಯಲ್ಲ. ಬೆಂಬಲ ಸೂಚಿಸಿರುವ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಪದಚ್ಯುತಿ ಕೋರಿ ಸಹಕಾರ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.
ಮಾಜಿ ಅಧ್ಯಕ್ಷ ಕೆ.ಎಂ.ಬಸವೇಗೌಡ, ಗೀತಾ ಪುಟ್ಟಸ್ವಾಮಿ, ವಸಂತ, ಗೀರೀಶ್‍ಗೌಡ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.