ದುಶ್ಚಟ ಮುಕ್ತರಾಗಲು ಜನಜಾಗೃತಿ
ಕೋಲಾರ,ಸೆ.೨೧:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಈ ಕೆಲಸ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದರ ಜೊತೆಗೆ ಕ್ಷೇತ್ರದಿಂದ ಸಮಾಜಕ್ಕೆ ಸಮಯಕ್ಕೆ ಸರಿಯಾಗಿ ಹಲವಾರು ಅನುಕೂಲಗಳನ್ನು ಮಾಡಲು ಕಮಿಟಿಗಳು ಇದ್ದು, ಅದರಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯು ಒಂದಾಗಿದೆ.
ಜಿಲ್ಲೆಯಲ್ಲಿ ಮದ್ಯವರ್ಜನ ಶಿಬಿರಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತದೆ. ಇಂದು ಕೋಲಾರ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಕೋಲಾರ ಕಮಿಟಿಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಎಂ.ಕೆ. ವಾಸುದೇವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ೬ ತಿಂಗಳಲ್ಲಿ ಜನಜಾಗೃತಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುತ್ತಾ ಅಕ್ಟೋಬರ್-೦೨ ರಂದು ಗಾಂಧಿಜಯಂತಿ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಮಾಡುವ ಮೂಲಕ ದುಶ್ಚಟಗಳ ವಿರುದ್ದ ಹೋರಾಟ ಮಾಡುವ ಬಗ್ಗೆ ಚರ್ಚಿಸಿದರು.
ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜ್ಞಾನವಂತ ಪ್ರಜೆಗಳಾಗುವ ವೇದಿಕೆ ಅದು ಶಾಲೆಯಾಗಿದ್ದು, ಹಾಗಾಗಿ ಆ ಶಾಲೆಗಳಲ್ಲಿ ಮಕ್ಕಳಿಗೆ ದುಶ್ಚಟ ಮುಕ್ತರಾಗಿರುವ ಬಗ್ಗೆ ಜಾಗೃತಿ ಹಾಗೂ ಮಾಹಿತಿಯನ್ನು ನೀಡುವ ಕಾರ್ಯಕ್ರಮವಾದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಪ್ರತಿ ತಾಲ್ಲೂಕಿನಲ್ಲಿ ಮಧ್ಯವರ್ಜನ ಶಿಬಿರಗಳನ್ನು ಮಾಡಿ ನವಜೀವನ ಸದಸ್ಯರಿಗೆ ಬೇರೆ ಬೇರೆ ಸ್ವ-ಉದ್ಯೋಗ ಮಾಡಲು ಆರ್ಥಿಕವಾಗಿ ನೈತಿಕವಾಗಿ ಸಹಕಾರ ನೀಡುವ ಬಗ್ಗೆ ಮಾತನಾಡಲಾಯಿತು.
ಜಿಲ್ಲಾ ನಿರ್ದೇಶಕ ಪದ್ಮಯ್ಯ ಸಿ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಪರಿವರ್ತನೆಯ ರುವಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕ್ಷೇತ್ರ ಧರ್ಮಸ್ಥಳ ಪೂಜ್ಯರು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಾಂಧೀಜಿಯವರು ಕಂಡಂತಹ ರಾಮರಾಜ್ಯದ ಕನಸನ್ನು ಪೂಜ್ಯರು ಪ್ರೀತಿಯ ಕಾರ್ಯಕ್ರಮವಾದ ಜನಜಾಗೃತಿ ವೇದಿಕೆಯ ಮೂಲಕ ನನಸು ಮಾಡುತ್ತಿದ್ದಾರೆ.
ಜನಜಾಗೃತಿ ವೇದಿಕೆಯ ಮುಖೇನ ಶಾಲಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತರನ್ನಾಗಿಸುವ ಪರಿಣಾಮಕಾರಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿರುವುದು ಸಮಾಜಕ್ಕೆ ಪೂಜ್ಯರು ನೀಡಿರುವ ಕೊಡುಗೆ ಆಗಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ವೆಂಕಟೇಶ್, ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯಕ, ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಯೋಜನಾಧಿಕಾರಿಗಳು, ಹಾಗೂ ೮ ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.