ಉನ್ನತ ವಿಜ್ಞಾನಿಗಳ ಪಟ್ಟಿಗೆ ಡಾ.ಹೆಚ್.ಸಿ. ಮಂಜುನಾಥ
ಕೋಲಾರ,ಸೆ,೨೧-ಅಮೇರಿಕಾದ ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯವು ಸಿದ್ದಪಡಿಸಿರುವ ವಿಶ್ವದ ಶೇ.೨ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಕೋಲಾರ ನಿವಾಸಿ ಹಾಗೂ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹೆಚ್.ಸಿ.ಮಂಜುನಾಥ ಸತತವಾಗಿ ಐದನೇ ಬಾರಿ ಸ್ಥಾನ ಪಡೆದಿದ್ದಾರೆ.
ವಿಶ್ವದ ನ್ಯೂಕ್ಲಿಯಾರ್ ಮತ್ತು ಪಾರ್ಟಿಕಲ್ ಫಿಸಿಕ್ಸ್‌ನ ಸಂಶೋಧನೆಯಲ್ಲಿ ೫೧೦ನೇ ರ್‍ಯಾಂಕ್ ಪಡೆದಿರುವ ಅವರು, ಸದರಿ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ೧೬ ನೇ ರ್‍ಯಾಂಕ್ ಪಡೆದಿದ್ದಾರೆ.
ಡಾ. ಹೆಚ್.ಸಿ. ಮಂಜುನಾಥ ಅವರು ಕರ್ನಾಟಕ ರಾಜ್ಯ ಸರ್ಕಾರದ ೨೦೨೧ನೇ ಸಾಲಿನ ಸರ್. ಸಿ.ವಿ.ರಾಮನ್ ಯಂಗ್ ಸೈಂಟಿಸ್ಟ್ ಸ್ಟೇಟ್ ಅವಾರ್ಡ್, ೨೦೧೯ ರಲ್ಲಿ ಭಾರತ ಸರ್ಕಾರದ ಭಾಭಾ ಅಣು ಸಂಶೋಧನಾ ಕೇಂದ್ರದ ಡಾ. ತರುಣ್ ದತ್ತ ಮೆಮೊರಿಯಲ್ ಪ್ರಶಸ್ತಿ ಹಾಗೂ ೨೦೧೩ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವಿಷನ್ ಗ್ರೂಪ್‌ನ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನ ವರದಿ, ಸಂಶೋಧನ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್- ಇಂಡೆಕ್ಸ್, ಐ-ಇಂಡೆಕ್ಸ್ ಸೇರಿ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಡಾ. ಹೆಚ್.ಸಿ. ಮಂಜುನಾಥ ರವರು ೪೫೦ ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ.
ಡಾ.ಹೆಚ್.ಸಿ.ಮಂಜುನಾಥರನ್ನು ದೇವನಹಳ್ಳಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಂಜಯ್ಯ, ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತ್ಯಾಗರಾಜು ಅಭಿನಂದಿಸಿದ್ದಾರೆ.