ಡಿಸಿಸಿ ಬ್ಯಾಂಕ್ ಸರ್ವ ಸದಸ್ಯರ ೬೨ನೇ ಮಹಾಸಭೆ
ಕೋಲಾರ,ಸೆ,೨೧- ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಎರಡೂ ಜಿಲ್ಲೆಗಳ ರೈತರ ಮತ್ತು ಮಹಿಳೆಯರ ಜೀವನಾಡಿಯಾಗಿದೆ.ಆದರೆ ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತರು ತಮ್ಮ ಸ್ವಾರ್ಥಕ್ಕಾಗಿ ಬಡವರ ಜೀವನದ ಜತೆ ಚೆಲ್ಲಾಟ ವಾಡುತ್ತಿದ್ದಾರೆ ಅಧಿಕಾರಿಗಳು ಚುನಾವಣೆಯನ್ನು ನಡೆಸಿ, ಆಡಳಿತ ಮಂಡಳಿ ರಚನೆ ಮಾಡಬೇಕು ಎಂದು ಶೇಷಾಪುರ ಗೋಪಾಲ್ ಒತ್ತಾಯಿಸಿದರು.
ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ೬೨ನೇ ಮಹಾ ಸಭೆಯಲ್ಲಿ ಅವರು ಮಾತನಾಡಿ ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದ ನಂತರ ಮಹಿಳೆಯರಿಗೆ, ರೈತರಿಗೆ ಎಷ್ಟು ಸಾಲ ನೀಡಲಾಗಿದೆ ? ಮರು ಪಾವತಿ ಎಷ್ಟಾಗಿದೆ ? ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿರುವ ಮಹಿಳಾ ಸಂಘಗಳಿಗೆ ಸಾಲ ಯಾಕೆ ವಿತರಿಸುತ್ತಿಲ್ಲ ? ಎಂದು ಪ್ರಶ್ನಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಆಡಳಿತಾಧಿಕಾರಿ ಬಿ.ಕೆ.ಸಲೀಂ ಪ್ರತಿಕ್ರಿಯಿಸಿ ಬ್ಯಾಂಕಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಬಡ್ಡಿ ಹಣ ಬರಬೇಕಾಗಿದೆ. ಇದರಿಂದಾಗಿ ಬ್ಯಾಂಕ್ ರೂ ೯.೮೮ ಕೋಟಿ ನಷ್ಟದಲ್ಲಿದೆ. ಸಾಲ ವಿತರಣೆ ಕಡಿಮೆಯಾಗಿದ್ದು, ಬಾಕಿ ಇರುವ ಸಾಲವನ್ನು ವಸೂಲಿ ಮಾಡಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಹಿಂದೆ ಆಗಿರುವ ತಪ್ಪುಗಳು ಮರುಕಳುಹಿಸದಂತೆ ಎಚ್ಚರವಹಿಸಲಾಗಿದೆ. ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿರುವ ಸಂಘಗಳ ಪಟ್ಟಿ ತಯಾರಿಸಿದ್ದು, ಸಾಲ ವಿತರಿಸಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ. ಇದಕ್ಕೆ ಸಂಪನ್ಮೂಲ ಕ್ರೋಡಿಕರಣ ಮಾಡಲಾಗುತ್ತಿದೆ ಎಂದು ಉತ್ತರಿಸಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಆಡಳಿತ ಮಂಡಳಿಯ ಇರುವ ತನಕ ಬ್ಯಾಂಕ್ ಚೆನ್ನಾಗಿ ನಡೆಯುತ್ತಿತ್ತು, ಆಡಳಿತಾಧಿಕಾರಿ ಬಂದ ನಂತರ ಪಾತಾಳಕ್ಕೆ ಕುಸಿಯುತ್ತಿದೆ. ಸಾಲ ವಿತರಣೆ ಮಾಡದಿದ್ದರೆ ಸಂಘಗಳ ಸದಸ್ಯರು ಉಳಿತಾಯ ಹಣ, ರೈತರು ಇಟ್ಟಿರುವ ಠೇವಣಿಯನ್ನು ವಾಪಸ್ ಪಡೆಯುತ್ತಾರೆ. ಎಚ್ಚರಿಕೆ ತಪ್ಪಿದರೆ ಬ್ಯಾಂಕ್ ಅಸ್ತಿತ್ವ ಕಳೆದು ಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಹನುಮೆಗೌಡ ಮಾತನಾಡಿ ಎನ್.ಆರ್.ಎಲ್ ಮತ್ತು ಎನ್.ಯು.ಎಲ್.ಎಲ್. ಬಡ್ಡಿ ಮೊತ್ತ ಕೇಂದ್ರ ಸರ್ಕಾರದಿಂದ ೬೯ ಕೋಟಿ ರೂ. ಬರಬೇಕಾಗಿದೆ. ಸಂಸದರಾದ ಮಲ್ಲೇಶ್ ಬಾಬು ಮತ್ತು ಡಾ.ಕೆ.ಸುಧಾಕರ್ ಅವರನ್ನು ಸಂಪರ್ಕಿಸಿ ಕೇಂದ್ರದ ಅಧಿಕಾರಿಗಳ ಮೇಲೆ ಅಗತ್ಯವಾದರೆ ಕೇಂದ್ರದ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಬಳಿ ನಿಯೋಗ ತೆರಳಿ ಒತ್ತಡ ತಂದು ಬಿಡುಗಡೆಗೊಳಿಸಲು ಮನವಿ ಮಾಡೊಣಾ ಅದರೆ ಇದಕ್ಕೆ ಅಧಿಕಾರಿಗಳ ನಿಯೋಗ ಬರಬೇಕೆಂದು ಹೇಳಿದಾಗ ಆಡಳಿತಾಧಿಕಾರಿ ನಾವು ಬ್ಯಾಂಕಿನ ಅಭಿವೃದ್ದಿಗಾಗಿ ಎಲ್ಲಿಗೆ ಬೇಕಾದರೂ ಬರಲು ಸಿದ್ದರಿದ್ದೇವೆ ಎಂದು ತಮ್ಮ ಸಮ್ಮತಿಯನ್ನು ವ್ಯಕ್ತ ಪಡೆಸಿದರು.
ಇದಕ್ಕೆ ಶ್ರೀನಿವಾಸಪುರ ವೆಂಕಟೇಶ್, ಭಕ್ಷು, ದಿಂಬಾಲ ಅಶೋಕ, ನಾರಾಯಣಸ್ವಾಮಿ, ಇದರಲ್ಲಿ ರಾಜಕೀಯ ಬೆರಕೆ ಮಾಡುವುದು ಬೇಡ, ಅವರನ್ನು ಭೇಟಿ ಮಾಡಬೇಕಾದ ಅನಿವಾರ್ಯತೆ ಏನಿದೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಬ್ಯಾಂಕಿನಲ್ಲಿ ಆಡಳಿತ ಮಂಡಳಿ ನಿರ್ಗಮಿಸಿದ ಮೇಲೆ ಕೇಳುವವರೇ ಇಲ್ಲದಂತಾಗಿದ್ದು ಭಾರಿ ಅವ್ಯವಹಾರ ನಡೆದಿದ್ದು ನಷ್ಟಕ್ಕೆ ಕಾರಣವಾಗಿದೆ. ಈ ಹಿಂದೆ ಬ್ಯಾಂಕ್ ಯಾವ ರೀತಿ ಮುಚ್ಚುವ ಹಂತದಲ್ಲಿತ್ತು ಅದೇ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ ಕೊಡಲೆ ನಡೆದಿರುವಂತ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದರು.
ಬ್ಯಾಂಕಿನ ನಿರ್ದೇಶಕ ಹಾಗೂ ಕಡಗಟ್ಟೂರು ಸೂಸೈಟಿ ಅಧ್ಯಕ್ಷ ಕೆ.ವಿ.ದಯಾನಂದ ಮಾತನಾಡಿ, ಲೆಕ್ಕಪರಿಶೋಧನೆಯಲ್ಲಿ ಹಣ ಸೋರಿಕೆಯಾಗಿರುವುದು ನಮೂದು ಮಾಡಿದ್ದೀರಿ, ಅದರೆ ಕೃಷಿಯೇತರ ಸಾಲಕ್ಕೆ ಬಡ್ಡಿ ದರ ನಿಗಧಿ ಮಾಡುವುದು ಬ್ಯಾಂಕ್ ಹೊರತಾಗಿ ಸರ್ಕಾರವಲ್ಲ. ಹಾಗಾಗಿ ಆಡಳಿತಾಧಿಕಾರಿಗಳು ಅಡಿಟ್ ಅಕ್ಷೇಪದಲ್ಲಿ ಯಾಕೆ ತಪ್ಪು ನಮೂದಿಸಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಆಡಳಿತಾಧಿಕಾರಿ ಸಲೀಂ ಪ್ರತಿಕ್ರಿಯಿಸಿ ಆಗಿರುವ ತಪ್ಪನ್ನು ತಿದ್ದಿಕೊಂಡು ಸರಿಪಡಿಸಿ ಕೊಳ್ಳಲಾಗುವುದು ಎಂದು ಅಧಿಕಾರಿಗಳಿಂದ ಅಗಿರುವಂತ ತಪ್ಪುಗಳನ್ನು ಒಪ್ಪಿಕೊಂಡು ವಿಷಾಧಿಸಿದರು,
ಇದಕ್ಕೂ ಮುನ್ನ ಸಾಮಾನ್ಯ ಸಭೆಯು ಪ್ರಾರಂಭವಾಗುತ್ತಿದ್ದಂತೆ, ಸದಸ್ಯರು ಚುನಾವಣೆಯ ಬಗ್ಗೆ ಚರ್ಚಿಸಿದರು. ಇದಕ್ಕೆ ಪರ ವಿರೋಧ ವ್ಯಕ್ತವಾಯಿತು. ಸಕಾಲಕ್ಕೆ ಚುನಾವಣೆ ನಡೆಸದ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ಸಕಾಲಕ್ಕೆ ಚುನಾವಣೆ ನಡೆಸಿ ಆಡಳಿತ ಮಂಡಳಿ ರಚನೆ ಮಾಡಬೇಕೆಂದು ಸದಸ್ಯರೆಲ್ಲ ಒಕ್ಕೊರಲಿನಿಂದ ನಿರ್ಣಯ ಸೂಚಿಸಿದರು.
ಎರಡೂ ಜಿಲ್ಲೆಯ ಕೆಲ ಸದಸ್ಯರು ಚುನಾವಣೆ ಪರ ಧ್ವನಿ ಎತ್ತಿದರು, ಇನ್ನು ಕೆಲವರು ಭ್ರಷ್ಟಚಾರದ ತನಿಖೆ ಮುಗಿಯುವ ತನಿಖೆ ನಡೆಯಲಿ ಎಂದು ಕೂಗಿದರು. ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಯಿತು. ನಂತರ ಪೊಲೀಸರ ಮಧ್ಯ ಪ್ರವೇಶಿ ಎಲ್ಲರನ್ನು ಸಮಾಧಾನ ಪಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು ಸಭೆಯನ್ನು ಮುಂದುವರೆಸಲು ಅನುವು ಮಾಡಿ ಕೊಟ್ಟರು.
ಸಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶೀಲಾ, ಎಜಿಎಂಗಳಾದ ಶಿವಕುಮಾರ್, ನಾಗೇಶ್, ದೊಡ್ಡಮುನಿ ಹುಸೇನ್ ಸಾಬ್ , ಖಲೀಂಮುಲ್ಲಾ, ಪದ್ಮಮ್ಮ, ನಾಗೇಶ್, ಇತರರು ಹಾಜರಿದ್ದರು.