ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮಾರಾಟಕ್ಕಿಲ್ಲ-ಕುಲಪತಿ
ಕೋಲಾರ,ಸೆ,೨೧- ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮಾರಾಟಕ್ಕಿಲ್ಲ, ಹಣ ಪಡೆದು ಅಂಕ ಕೊಡಿಸುವ ಆರೋಪಗಳಿಗೆ ದಾಖಲೆ ಸಮೇತ ಗಮನಕ್ಕೆ ತಂದರೆ ತಕ್ಷಣ ಪೊಲೀಸರಿಗೆ ದೂರು ನೀಡಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ನಿರಂಜನವಾನಳ್ಳಿ ಸ್ಪಷ್ಟನೆ ನೀಡಿದರು.
ತಾಲ್ಲೂಕಿನ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಾರ್ಷಿಕ ಉತ್ತರೋತ್ತರ ಪ್ರಶಸ್ತಿಗೆ ಭಾಜನರಾದ ಕೋಲಾರದ ಕವಿ,ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ತೃತೀಯ ಲಿಂಗ ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು.
ಶ್ರೀನಿವಾಸಪುರ ತಾಲ್ಲೂಕಿನ ಸಿರಿಧಾನ್ಯ ಸಂರಕ್ಷಣಾ ಮಹಿಳೆ ರತ್ನಮ್ಮ ಅವರೂ ಸಹಾ ಈ ಪ್ರಶಸ್ತಿಗೆ ಭಾಜನರಾಗಿದ್ದು, ಅವರು ದೆಹಲಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಬರಲಾಗಲ್ಲ ಎಂದು ತಿಳಿಸಿದ್ದು, ಅವರ ನಿವಾಸಕ್ಕೆ ತೆರಳಿ ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಇತ್ತೀಚೆಗೆ ಮಾಧ್ಯಮಗಳಲ್ಲಿ ಬೆಂಗಳೂರು ಉತ್ತರ ವಿವಿಯಲ್ಲಿ ಯಾರೋ ಗೋಪಾಲರೆಡ್ಡಿ, ಕೇಶವ ಎಂಬ ನೌಕರರು ದುಡ್ಡು ಪಡೆದು ಅಂಕ ಕೊಡಿಸುವುದಾಗಿ ಹೇಳಿದ್ದಾರೆ ಎಂಬ ಆರೋಪಗಳ ಕುರಿತು ಸ್ಪಷ್ಟೀಕರಣ ನೀಡಿದ ಅವರು, ಅಂತಹ ದೂರುಗಳಿದ್ದರೆ ಕೂಡಲೇ ಗಮನಕ್ಕೆ ತನ್ನಿ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಕೋರುವುದಾಗಿ ತಿಳಿಸಿ, ಆ ಹೆಸರಿನ ಯಾವ ನೌಕರರು ನಮ್ಮ ವಿವಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.
ಬೆಂಗಳೂರು ಉತ್ತರ ವಿವಿ ಘನತೆಗೆ ಕುತ್ತು ತರುವ ಕೆಲಸಗಳು ಆಗಲು ಬಿಡುವುದಿಲ್ಲ ಎಂದು ತಿಳಿಸಿದ ಕುಲಪತಿಗಳು, ಉತ್ತರೋತ್ತರ ಪ್ರಶಸ್ತಿ ಪ್ರದಾನ ಇದು ಎರಡನೇ ವರ್ಷ ಇದು ಹೀಗೆಯೇ ನೂರಾರು ವರ್ಷ ಮುಂದುವರೆಯಬೇಕು, ವಿವಿಯ ಚರಿತ್ತೆಯಲ್ಲಿ ಒಳ್ಳೆಯ ದಾಖಲೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೇಂದ್ರ ವಿವಿ ನಿಮ್ಹಾನ್ಸ್‌ನ ಕುಲಸಚಿವ ಡಾ.ಶಂಕರನಾರಾಯಣರಾವ್ ಮಾತನಾಡಿ, ಶಿಕ್ಷಕರು ಮೊಬೈಲ್‌ಗೆ ದಾಸರಾಗದಿರಿ, ಮೊಬೈಲ್ ನೋಡಿ ಪಾಠ ಮಾಡುವುದು ಬೇಡ ಪುಸ್ತಕ ಓದುವ ಅಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದ ಅವರು, ಶಿಕ್ಷಕರು ಕೀಳಿರಿಮೆ ತೊರೆದು ಒಂದು ಸಂಸ್ಥೆಯ ಘನತೆ ಹೆಚ್ಚಿಸಬೇಕು ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದರು.
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿವಿಗಳಲ್ಲಿನ ಶಿಕ್ಷಣ ಪದ್ದತಿ ಬದಲಾಗಬೇಕು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಿಂತನೆಗೆ ಪ್ರೇರಣೆ ನೀಡುವ ಶಿಕ್ಷಣ ಬೇಕು, ಈ ನೆಲದ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಸ್ವೀಕರಿಸಿದ ತ್ರಿಲಿಂಗಿ ಅಕ್ಕೈಪದ್ಮಶಾಲಿ ನನಗೆ ಪ್ರಶಸ್ತಿ ನೀಡಿರುವುದು ಖುಷಿಯ ಸಂಗತಿ ಎನಿಸಿಲ್ಲ, ಇದು ತೃತೀಯ ಲಿಂಗಿಗಳನ್ನು ಸಮಾಜ ದಾರುಣವಾಗಿ ನಡೆಸಿಕೊಂಡಿರುವುದಕ್ಕೆ ವಿಷಾದವಷ್ಟೆ ಎಂದು ತಿಳಿಸಿ, ವಿವಿ ತಮ್ಮನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಗೋಪಾಲರೆಡ್ಡಿ, ಮುನಿನಾರಾಯಣಪ್ಪ, ವೆಂಕಟೇಶಪ್ಪ, ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ತಿಪ್ಪೇಸ್ವಾಮಿ,ಆಡಳಿತ ಪ್ರಭಾರ ಕುಲಸಚಿವರಾದ ಡಿ.ಕುಮುದಾ, ಮತ್ತಿತರು ಭಾಗವಹಿಸಿದ್ದರು.