ಸಿಇಟಿ ಗೊಂದಲದ ಗೂಡು: ಶಾಸಕ ನಮೋಶಿ
ಕಲಬುರಗಿ:ಏ.19: ಈ ವರ್ಷ ಕರ್ನಾಟಕದ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯು ಗೊಂದಲದ ಗೂಡಾಗಿದೆ. ಕರ್ನಾಟಕದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿರುವುದು ಇಲ್ಲಿ ಸ್ಪಷ್ಟವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅವರು ಟೀಕಿಸಿದ್ದಾರೆ.
ವೃತ್ತಿಪರ ಕೋರ್ಸ್‍ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ಅಗ್ರಿಕಲ್ಚರ್, ಪ್ಯಾರಾ ಮೆಡಿಕಲ್ ಸೇರಿದಂತೆ ಪದವಿ ಪ್ರವೇಶಕ್ಕಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯು ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ದುರಂತವಾಗಿ ಪರಿಣಮಿಸಿದೆ. ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಇದು ರಾಜ್ಯ ಸರ್ಕಾರದ ವೈಫಲ್ಯವೂ ಹೌದು ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಎರಡು ದಿನಗಳ ಕಾಲ ನಡೆದ ಪರೀಕ್ಷೆಯಲ್ಲಿ ಅನೇಕ ಗೊಂದಲಗಳು ನಡೆದರೂ, ರಾಜ್ಯ ಸರ್ಕಾರದ ಸಂಬಂಧಪಟ್ಟ ಶಿಕ್ಷಣ ಸಚಿವರು ಕೇವಲ ಚುನಾವಣೆಯಲ್ಲಿ ನಿರತರಾಗಿದ್ದಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಈ ರೀತಿ ದುರಂತ ನಡೆದರೂ ಅವರು ಇಲ್ಲಿಯವರೆಗೂ ಒಂದು ಹೇಳಿಕೆಯನ್ನೂ ನೀಡದೆ ಕಣ್ಣು ಮುಚ್ಚಿ ಕುಳಿತು ಕೊಂಡಿದ್ದಾರೆ. ಇವರಿಗೆ ಚುನಾವಣೆಯೇ ಮುಖ್ಯವಾಗಿದೆ ಹೊರತು, ವಿದ್ಯಾರ್ಥಿಗಳ ಜೀವನ ಮುಖ್ಯವಾಗಿಲ್ಲ. ಇನ್ನು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿಯವರು ತಜ್ಞರ ಸಮಿತಿಯನ್ನು ರಚನೆ ಮಾಡಿ ಗಮನಹರಿಸಲಾಗುವುದು ಎಂದು ಹೇಳಿಕೆ ನೀಡಿ ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ನಾಲ್ಕು ವಿಷಯದ ಪತ್ರಿಕೆಗಳಲ್ಲಿ ಜೀವಶಾಸ್ತ್ರದಲ್ಲಿ 11, ಗಣಿತಶಾಸ್ತ್ರದಲ್ಲಿ 11, ಭೌತಶಾಸ್ತ್ರದಲ್ಲಿ 08, ರಸಾಯನ ಶಾಸ್ತ್ರದಲ್ಲಿ 21 ಪ್ರಶ್ನೆಗಳನ್ನು ಸಂಬಂಧಿಸಿದ ಪಠ್ಯಕ್ರಮದಿಂದ ತೆಗೆಯದೆ, ಪಠ್ಯಕ್ರಮದಿಂದ ಹೊರತು ಪಡಿಸಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಿದ್ದಾರೆ. ನಾಳೆ ಒಂದು ವೇಳೆ ವಿದ್ಯಾರ್ಥಿಗಳು ಏನಾದರೂ ಮಾಡಿಕೊಂಡರೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಯನ್ನು ಸುಲಲಿತವಾಗಿ ನಡೆಸದೆ, ಪ್ರಾರಂಭದಿಂದಲೇ ಅನೇಕ ಗೊಂದಲಗಳಿಂದ ನಡೆಸಿದೆ. ಪರೀಕ್ಷಾ ಕೇಂದ್ರಗಳ ಜಿಲ್ಲೆಗಳಿಂದ ಬೇರೆ ಜಿಲ್ಲೆಗಳಿಗೆ ಹಾಗೂ ಒಂದೇ ನೊಂದಣಿ ಸಂಖ್ಯೆಯನ್ನು ಎರಡು ವಿದ್ಯಾರ್ಥಿಗಳಿಗೆ ನೀಡಿದ್ದಲ್ಲದೇ, ಒಂದೇ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ನಡೆಸಿದ್ದನ್ನು ನೋಡಿದರೆ ಪ್ರಾಧಿಕಾರವು ಹಾಗೂ ರಾಜ್ಯ ಸರ್ಕಾರವು ಯಾವುದೋ ದುರುದ್ದೇಶವನ್ನು ಇಟ್ಟುಕೊಂಡು ಈ ರೀತಿ ಮಾಡಿದೆ ಎಂಬ ಅನುಮಾನ ಬರುತ್ತಿದೆ. ಆದ್ದರಿಂದ, ಕೂಡಲೇ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುವುದನ್ನು ಬಿಟ್ಟು ಇದಕ್ಕೆ ಕೂಡಲೇ ಸೂಕ್ತ ಪರಿಹಾರವನ್ನು ಒದಗಿಸಿ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.