ಮಹಾ ಮಾನವತಾವಾದಿ ದೇವರ ದಾಸಿಮಯ್ಯ:ಸಂತೋಷ ಬಂಡೆ
ವಿಜಯಪುರ,ಏ.19:ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕ ಮಾಡಿದ ವಿಶ್ವದ ಪ್ರಥಮ ವಚನಕಾರ ದೇವರ ದಾಸೀಮಯ್ಯನವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ತತ್ವ, ನಡೆ, ನುಡಿಗಳನ್ನು ಎಲ್ಲರೂ ರೂಢಿಸಿಕೊಳ್ಳಬೇಕೆಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಜಿಲ್ಲೆಯ ನಿಡಗುಂದಿ ಪಟ್ಟಣದ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ದೇವರ ದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ದೇವರ ದಾಸಿಮಯ್ಯನವರು ಸಮಾಜದ ಮೌಢ್ಯತೆ, ಅಸಮಾನತೆ, ಮೇಲು-ಕೀಳು ಮನೋಭಾವಗಳನ್ನು ಕಿತ್ತೊಗೆದ ಅದ್ವಿತೀಯ ಸಮಾಜ ಸುಧಾರಕರಾಗಿದ್ದರು. ಅವರು ಮನುಷ್ಯತ್ವದ ಸುಪ್ರಭಾತವನ್ನು ಹಾಡಿದ ಮಾನವತಾವಾದಿಯಾಗಿದ್ದಾರೆ ಎಂದು ಹೇಳಿದರು.
ಡಾ. ಅಲ್ಲಮಪ್ರಭು ಅಂಬಿ ಮಾತನಾಡಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ತಮ್ಮ ವಚನಗಳಲ್ಲಿ ಸರಳವಾಗಿ ತಿಳಿಸಿ ಅದನ್ನು ಪಾಲನೆ ಮಾಡುವ ಹಾಗೆ ಕ್ರಾಂತಿ ಮಾಡಿದ ವಚನಕಾರರು ದೇವರ ದಾಸಿಮಯ್ಯನವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿರೂಪಾಕ್ಷಪ್ಪ ಅಂಕದ ಮಾತನಾಡಿ, ದಾಸಿಮಯ್ಯನವರು ವಚನಗಳ ಮೂಲಕ ಸಾಮಾಜಿಕ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಮುಂದಿನ ವಚನಾಕರರಿಗೆ ಪ್ರೇರಣೆ ಮತ್ತು ಸ್ಪೂರ್ತಿಯ ಸೆಲೆಯಾಗಿದ್ದರು ಎಂದು ಹೇಳಿದರು.
ರುದ್ರಯ್ಯ ಗಣಾಚಾರಿ ಸಾನಿಧ್ಯ ವಹಿಸಿದ್ದರು. ಶಂಕ್ರಪ್ಪ ಹಳಮನಿ, ಎಸ್ ಕೆ ಗೌಡರ, ಮೋಹನ ಸಾಗರ, ಶಂಕ್ರಪ್ಪ ಕೊಳ್ಳಿ, ದೇವಾಂಗ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ, ನೇಕಾರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿಕುಮಾರ ಕೋಷ್ಟಿ, ಹಿರಿಯರಾದ ನಾಗಪ್ಪ ಭಾವಿಕಟ್ಟಿ, ಆರ್ ಎಸ್ ಪ್ಯಾಟಿಗೌಡರ, ಡಾ.ಸಂತೋಷ ಬಸರಕೋಡ, ಆನಂದ ಗೌಡರ, ಸಂಗಮೇಶ ರೂಢಗಿ, ಬಸವರಾಜ ಹುಬ್ಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.