ಮಾಜಿ ಶಾಸಕ ರಮೇಶಕುಮಾರ ಪಾಂಡೆ ಸೇವೆ ಸ್ಮರಣೆ
ಬೀದರ್: ಏ.19:ಇಲ್ಲಿಯ ಬಸವನಗರ ಕಾಲೊನಿಯ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಮಾಜಿ ಶಾಸಕ ರಮೇಶಕುಮಾರ ಪಾಂಡೆ ಅವರಿಗೆ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
ಬೀದರ್ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ರಮೇಶಕುಮಾರ ಪಾಂಡೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜ ನುಡಿದರು.
ಪಾಂಡೆ ಅವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು. ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದರು ಎಂದು ಹೇಳಿದರು.
ಶ್ರೇಷ್ಠ ನಾಯಕ, ಸಮಾಜ ಸೇವಕ ಹಾಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಸರಳ, ಸಜ್ಜನಿಕೆಯಿಂದಾಗಿ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.
ಪಾಂಡೆ ಅವರು ಇಹಲೋಕ ತ್ಯಜಿಸಿದರೂ ಎಲ್ಲರ ಮನದಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿದರು.
ಡಾ. ಮಹಾಂತ ಆನಂದಗಿರಿ ಮಹಾರಾಜ, ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ದುಕಾನದಾರ್, ಖಜಾಂಚಿ ಪ್ರಭಾಕರ ಮೈಲಾಪುರೆ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ದೇಗಲಮಡಿ, ರವಿ ಮಲಸಾ, ಪ್ರಮುಖರಾದ ಇಶಾನ್ ಯರಮಲ್ಲಿ, ದತ್ತಗಿರಿ ಮಹಾರಾಜ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಮಹಾದೇವಿ ಬೀದೆ, ಕನ್ನಡ ಮಾಧ್ಯಮ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಜಯದೇವಿ ಯದಲಾಪುರೆ, ಸಂಸ್ಥೆಯ ಶಾಲಾ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.