ಮಕ್ಕಳಿಗೆ ಮೂರು ದಿನ ನಗುಮಗು ಶಿಬಿರ
ದೇವದುರ್ಗ.ಏ.೧೯- ಬೇಸಿಗೆ ದಿನಗಳಲ್ಲಿ ಶಾಲೆಗಳಿಗೆ ರಜೆ ನೀಡಿರುವ ಕಾರಣ ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚುಟವಟಿಕೆಗಳಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಮೂರು ದಿನ ನಗುಮಗು ಶಿಬಿರ ಆಯೋಜಿಸಿದ್ದು ಇದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದೆ ಎಂದು ಕೋತಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನಾಗಲಕ್ಷ್ಮಿ ಹೇಳಿದರು.
ತಾಲೂಕಿನ ಮಾನಸಗಲ್ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ನಗುಮಗು ತರಬೇತಿ ಶಿಬಿರ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಶಿಕ್ಷಣದ ಜತೆಗೆ ಪಠ್ಯೇತರ ವಿಷಯದ ಬಗ್ಗೆ ಬೋಧನೆ ಮಾಡುತ್ತಿದ್ದು ಮಕ್ಕಳು ಪಾಲ್ಗೊಂಡು ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗೆ ಗುಣಮಟ್ಟ ಸುಧಾರಣೆಗೆ ಸರ್ಕಾರ ನಾನಾ ಯೋಜನೆ ಜಾರಿಗೊಳಿಸಿದೆ. ಬಾಲಕಾರ್ಮಿಕ ಪದ್ಧತಿ ಬಿಡಿಸಿ ಮಕ್ಕಳು ಕಲಿಕೆಗೆ ಕಡೆಗೆ ಇನ್ನಷ್ಟು ಆಸಕ್ತಿದಾಯಕರಾಗಲು ಇಂಥ ಶಿಬಿರ ಸಹಕಾರಿಯಾಗಲಿವೆ. ಪ್ರತಿಭೆ ಗುರುತಿಸಲು ಶಿಬಿರ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಕೌಶಲ ಪ್ರದರ್ಶನ ಮಾಡಬೇಕು. ಇಲ್ಲಿ ನೀಡುವ ಅಂಶವನ್ನು ಅರಿತುಕೊಂಡು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಡಾನ್‌ಬೋಸ್ಕೊ ಸಂಸ್ಥೆ ಸಹಾಯಕ ನಿರ್ದೇಶಕ ಫಾದರ್ ವರ್ಗೀಸ್, ಪೋಷಕ ಯೋಜನೆ ಸಂಯೋಜಕ ನಾಗರಾಜ ಮಾನಸಗಲ್, ರಮೇಶ ಕುಲಕರ್ಣಿ, ಸಿದ್ದಲಿಂಗಪ್ಪ ಕಾಕರಗಲ್, ಶಿವರಾಜ್‌ಕುಮಾರ, ಯಲ್ಲಮ್ಮ, ಮಕ್ಕಳ ಪ್ರತಿನಿಧಿ ಮೀನಾಕ್ಷಿ, ಸುಶೀಲದೇವಿ, ಪದ್ಮಾವತಿ, ರಂಗಮ್ಮ, ಪದ್ಮಾವತಿ, ಶಿವನಮ್ಮ ಕೋತಿಗುಡ್ಡ, ಸುಮಿತ್ರಾ ಇತರರಿದ್ದರು.
೧೯-ಡಿವಿಡಿ-೧