ಲಕ್ಷ್ಮಣ್‍ಗೆ ಒಕ್ಕಲಿಗರ ಪೂರ್ಣ ಬೆಂಬಲ
ಸಂಜೆವಾಣಿ ನ್ಯೂಸ್
ಮೈಸೂರು,ಏ.19:- ಬಿಜೆಪಿಯಿಂದ ಒಕ್ಕಲಿಗ ಸಂಸದರಿಗೆ ಟಿಕೇಟ್ ನಿರಾಕರಿಸಿದ ಹಿನ್ನೆಲೆ ಹಾಗೂ ಕಾಂಗ್ರೆಸ್ ನಿಂದ ಸಮುದಾಯದ ಲಕ್ಷ್ಮಣ್ ಅವರಿಗೆ ಅವಕಾಶ ಕೊಟ್ಟಿರುವ ಕಾರಣದಿಂದ ಈ ಬಾರಿ ಸಮುದಾಯ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ತಮ್ಮ ಮತ ಹಾಕುವ ನಿರ್ಣಯವನ್ನು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ನಿರ್ಧಾರವನ್ನು ಘೋಷಣೆ ಮಾಡಿತು.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಮಾತನಾಡಿ, ಕಳೆದೆರಡು ಚುನಾವಣೆಯಲ್ಲಿ ಒಕ್ಕಲಿಗರಾಗಿದ್ದ ಪ್ರತಾಪಸಿಂಹ ಅವರಿಗೆ ಸಮುದಾಯ ಬೆಂಬಲ ಸೂಚಿಸಿತ್ತು. ಅವರಿಗೆ ಟಿಕೇಟ್ ತಪ್ಪುವ ಸಮುದಾಯದಲ್ಲೂ ಅವರ ಪರವಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದೇವೆ. ಆದರೂ ಬಿಜೆಪಿ ಹೈಕಮಾಂಡ್ ಅರಸು ಸಮುದಾಯದ ಮೈಸೂರು ಅರಸು ಮನೆತನದ ಯಧುವೀರ್ ಅವರಿಗೆ ಟಿಕೇಟ್ ನೀಡಿದೆ. ಹೀಗಾಗಿ ಸಮುದಾಯದ ಲಕ್ಷ್ಮಣ್ ಅವರಿಗೆ ನಮ್ಮ ಬೆಂಬಲ ಎಂದರು.
ಬೇರೆ ಜಿಲ್ಲೆ ಹಾಗೂ ಬೇರೆ ವಿಚಾರಗಳಿಗೆ ನಾವು ಪ್ರಶ್ನಿಸುವ ನಿರ್ಣಯಿಸುವ ಕೆಲಸಕ್ಕೆ ನಾವು ಹೋಗುವುದಿಲ್ಲ. ಬದಲಿಗೆ ಜಿಲ್ಲಾ ಒಕ್ಕಲಿಗ ಸಂಘದ ಬಹುತೇಕರ ನಿರ್ಣಯದಂತೆ ಲಕ್ಷ್ಮಣ್ ಅವರ ಪರವಾಗಿ ಸಮುದಾಯದಲ್ಲಿ ಮತ ಕೇಳುತ್ತೇವೆ. ಆ ಮೂಲಕ ಇದು ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ ಎಂಬುದನ್ನು ಸಾಬೀತು ಪಡಿಸಿ ಬಿಜೆಪಿಗೆ ಪಾಠ ಕಲಿಸುವ ಕೆಲಸ ಮಾಡಲಾಗುವುದು ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಪ್ರತಾಪ್‍ಸಿಂಹ ಅವರಿಗೆ ಕೇವಲ ಒಕ್ಕಲಿಗರೆಂಬ ಕಾರಣಕ್ಕಾಗಿ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಇದೇ ರೀತಿ ಒಕ್ಕಲಿಗರನ್ನು ಎಲ್ಲೆಡೆ ತುಳಿಯಲಾಗುತ್ತಿದೆ. ಹೀಗಾಗಿ ಒಕ್ಕಲಿಗರ ಶಕ್ತಿ ಪ್ರದರ್ಶನಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಒಕ್ಕಲಿಗರೇ ಆಗಿರುವ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರನ್ನು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲಿಸಲಿದೆ ಎಂದು ಹೇಳಿದರು.
ಮಾಜಿ ಅಧ್ಯಕ್ಷ ಜಿ.ಮಂಜು ಮಾತನಾಡಿ, ಸಮುದಾಯದ ಅಸ್ತಿತ್ವದ ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ಸಮುದಾಯದ ಖಾತರಿ ಇರುವುದಕ್ಕೆ ಕಾಂಗ್ರೆಸ್ ನಲ್ಲಿ 41 ವರ್ಷದ ಬಳಿಕ ಅವಕಾಶ ಸಿಕ್ಕಿದೆ. ಮಹಾರಾಜರ ಮನೆತನದ ಮೇಲೆ ಗೌರವವಿದೆ. ಆದರೆ, ಇದು ಚುನಾವಣೆ ಆಗಿರುವುದರಿಂದ ಸ್ವಾಭಾವಿಕವಾಗಿ ಸಮುದಾಯದ ಹಿತ ಬಲಿ ಕೊಡಲು ಬರುವುದಿಲ್ಲ. ಈ ಕಾರಣಕ್ಕಾಗಿ ಕಾಂಗ್ರೆಸ್ ನ ಒಕ್ಕಲಿಗ ಅಭ್ಯರ್ಥಿಗೆ ಮತ ನೀಡಿ ಎಂದು ಕೋರುತ್ತೇನೆಂದರು.
ಉಪಾಧ್ಯಕ್ಷ ರವಿ ರಾಜಕೀಯ ಮಾತನಾಡಿ, ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಅವರ ಕೈ ಬಲ ಪಡಿಸಬೇಕು. ಬಿಜೆಪಿಯಲ್ಲಿ ಸಮುದಾಯವನ್ನು ಕಡೆಗಣಿಸಿರುವುದರಿಂದ ಸಮುದಾಯ ಈಗ ಕಾಂಗ್ರೆಸ್ ಪರವಾಗಿ ಅಲ್ಲದಿದ್ದರೂ ಕಾಂಗ್ರೆಸ್ ನಲ್ಲಿರುವ ಸಮುದಾಯದ ಲಕ್ಷ್ಮಣ್ ಗೆಲುವಿಗೆ ಮತ ನೀಡಬೇಕೆಂದು ಕೋರಿದರು.
ನಿರ್ದೇಶಕರಾದ ಆಲತ್ತೂರು ಜಯರಾಂ, ಬೋರೇಗೌಡ, ಜಿ.ಕುಮಾರಗೌಡ, ಉಮೇಶ್, ಸುಶೀಲಾ ನಂಜಪ್ಪ ಇನ್ನಿತರರು ಇದ್ದರು.